ಕುಶಾಲನಗರ, ಡಿ. 29: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಆಗಮಿಸಿದ ಸಂದರ್ಭ ಜಿಲ್ಲೆಯ ಆದಿವಾಸಿಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಬೇಕೆಂದು ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾ ಅಧ್ಯಕ್ಷ ಜೆ.ಪಿ. ರಾಜು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಆದಿವಾಸಿಗಳು ಹಲವು ಸಮಸ್ಯೆಗಳಿಂದ ನಲುಗುತ್ತಿದ್ದಾರೆ. ಅರಣ್ಯದ ಮೂಲನಿವಾಸಿಗಳನ್ನು ಅಲ್ಲಲ್ಲಿ ಒಕ್ಕಲೆಬ್ಬಿಸುವ ಕಾರ್ಯದೊಂದಿಗೆ ದೌರ್ಜನ್ಯಗಳು ನಡೆಯುತ್ತಿವೆ. ಈಗಾಗಲೇ ಹಲವಾರು ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದ್ದರೂ ಕೂಡ ಯಾವದೇ ರೀತಿಯ ಸ್ಪಂದನೆ ದೊರೆತಿಲ್ಲ. ಆದ್ದರಿಂದ ಜನವರಿ ತಿಂಗಳಲ್ಲಿ ಜಿಲ್ಲೆಗೆ ಭೇಟಿ ನೀಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಸಮಸ್ಯೆಗಳ ಬಗ್ಗೆ ಚರ್ಚಿಸಲು ಜಿಲ್ಲಾಡಳಿತ ಅವಕಾಶ ಕಲ್ಪಿಸಬೇಕೆಂದು ಅವರು ಕೋರಿದರು. ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಆರ್.ಕೆ. ಚಂದ್ರ ಮಾತನಾಡಿ, ಆದಿವಾಸಿಗಳ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿಗಳ ಅನುದಾನ ಬಿಡುಗಡೆಯಾಗುತ್ತಿದೆ. ಆದರೆ ಅದ್ಯಾವದೂ ಕೂಡ ಸಮರ್ಪಕವಾಗಿ ಬಳಕೆಯಾಗದೆ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿದರು.

ಆದಿವಾಸಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‍ನಲ್ಲಿ ಸಮರ್ಪಕವಾದ ಕೊಠಡಿಗಳು, ಆಹಾರ ದೊರಕುತ್ತಿಲ್ಲ. ಅಲ್ಲದೆ ಹಲವು ಹಾಡಿಗಳಲ್ಲಿ ಗಿರಿಜನರು ಮೂಲಭೂತ ಸಮಸ್ಯೆಗಳಿಂದ ವಂಚಿತರಾಗಿದ್ದಾರೆ. ತಾಲೂಕಿನ ಯಡವನಾಡು ಹಾಗೂ ಬಾಳೆಗುಂಡಿ ಹಾಡಿ ಜನರನ್ನು ಒಕ್ಕಲೆಬ್ಬಿಸಲು ಹುನ್ನಾರ ನಡೆಯುತ್ತಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕೂಡ ಸಂಬಂಧಿಸಿದ ಅಧಿಕಾರಿಗಳು ಸೂಕ್ತವಾಗಿ ಗಮನ ಹರಿಸದೆ ಇರುವ ಕಾರಣ ಮುಖ್ಯಮಂತ್ರಿಗಳ ಬಳಿ ನಮ್ಮ ಸಮಸ್ಯೆಗಳ ನಿವೇದನೆಗೆ ಜಿಲ್ಲೆಯ ಮುಖಂಡರುಗಳಿಗೆ ಅವಕಾಶ ಕಲ್ಪಿಸಬೇಕಿದೆ. ಒಂದು ವೇಳೆ ಚರ್ಚೆಗೆ ಅವಕಾಶ ಕಲ್ಪಿಸದಿದ್ದಲ್ಲಿ ಅಂದಿನ ಕಾರ್ಯಕ್ರಮದಲ್ಲಿ ಕಪ್ಪುಪಟ್ಟಿ ಧರಿಸಿ ವಿರೋಧ ವ್ಯಕ್ತಪಡಿಸಲಾಗುವದು ಎಂದರು.

ಗೋಷ್ಠಿಯಲ್ಲಿ ನಂಜರಾಯಪಟ್ಟಣ ಗ್ರಾ.ಪಂ. ಸದಸ್ಯ ತಮ್ಮಯ್ಯ, ಸಂಘದ ಸದಸ್ಯರಾದ ಕುಮಾರ, ಮುತ್ತಪ್ಪ ಇದ್ದರು.