ಮಡಿಕೇರಿ, ಡಿ. 29: ಪುರಾತನ ಕಾಲದಿಂದಲೂ ಕೊಡವ ಜನಾಂಗದವರು ದೇಶ ಪ್ರೇಮಿಗಳಾಗಿದ್ದು, ಶಿಸ್ತುಬದ್ಧ ಜೀವನ ಶೈಲಿಯನ್ನು ಅನುಸರಿಸಿಕೊಂಡು ಬಂದಿದ್ದಾರೆ. ದೇಶಕ್ಕೆ, ಸಮಾಜಕ್ಕೆ ಕಳಂಕ ತರದಂತೆ ಜನಾಂಗದವರು ಈ ಪರಂಪರೆಯನ್ನು ಮುಂದುವರಿಸಿ ಮಾದರಿಯಾಗಿರಬೇಕೆಂದು ವಿಧಾನಪರಿಷತ್ ಸದಸ್ಯ ಮಂಡೇಪಂಡ ಸುನಿಲ್ ಸುಬ್ರಮಣಿ ಅವರು ಕರೆ ನೀಡಿದರು. ಮಡಿಕೇರಿ ಕೊಡವ ಸಮಾಜದಲ್ಲಿ ಇಂದು ನಡೆದ ದೇಚೂರು ಕೊಡವ ಕೇರಿಯ ಪುತ್ತರಿ ಕೂಟದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಯುವ ಜನಾಂಗದವರು ಹಿರಿಯರು ಪಾಲಿಸಿಕೊಂಡು ಬಂದಿರುವ ಶಿಸ್ತು, ಪ್ರಬುದ್ಧತೆಯ ಜವಾಬ್ದಾರಿಯನ್ನು ಅರಿಯಬೇಕು. ಮಾದಕ ವಸ್ತುವಿನ ಚಟಕ್ಕೆ ಬಲಿಯಾಗುವದು, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವದು ಜನಾಂಗಕ್ಕೆ ಇರುವ ಶೋಭೆಯನ್ನು ಬದಿಗೊತ್ತಿ ಕಳಂಕ ತರುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಜನಾಂಗದವರಿಗೆ ಯಾವದೇ ಮೀಸಲಾತಿ ಇಲ್ಲ. ಉತ್ತಮ ಸಾಧನೆಯ ಮೂಲಕವಷ್ಟೇ ಸ್ಥಾನಮಾನ ಪಡೆಯಬೇಕಿದೆ ಎಂಬದನ್ನು ಅರ್ಥೈಸಿಕೊಳ್ಳಬೇಕೆಂದು ಸಲಹೆಯಿತ್ತ ಸುನಿಲ್ ಜನಾಂಗದವರು ಅತಿಥಿ ಸತ್ಕಾರಕ್ಕೆ ಹೆಸರಾಗಿದ್ದಾರೆ. ಆದರೆ ಈಗಿನ ಸನ್ನಿವೇಶದಲ್ಲಿ ಈ ವಿಚಾರದಲ್ಲಿ ಅಗತ್ಯ ಎಚ್ಚರ, ಕಾಳಜಿಯನ್ನು ವಹಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮತ್ತೋರ್ವ ಅತಿಥಿಯಾಗಿದ್ದ ರಾಜ್ಯಗುಪ್ತದಳ ಕೊಡಗು ಘಟಕದ ಸರ್ಕಲ್ ಇನ್ಸ್‍ಪೆಕ್ಟರ್ ಪೆಮ್ಮಚಂಡ ಅನೂಪ್ ಮಾದಪ್ಪ ಅವರು ಮಾತನಾಡಿ ಕೊಡವ ಪರಂಪರೆಯಲ್ಲಿ ಹುಟ್ಟಿನಿಂದ ಸಾವಿನತನಕ ಹಲವಾರು ಆಚಾರ- ವಿಚಾರಗಳು ಅಡಗಿದೆ. ಪ್ರಸ್ತುತ ಈಗಿನ ಪೀಳಿಗೆಗೆ ಇದರ ಅರಿವು ಇದೆ. ಆದರೆ ಮಕ್ಕಳಿಗೆ ಈ ಬಗ್ಗೆ ಅರಿವು ಇಲ್ಲ. ಈ ನಿಟ್ಟಿನಲ್ಲಿ ಮಕ್ಕಳಿಗೆ ಸಂಸ್ಕøತಿಯನ್ನು ಕಲಿಸಬೇಕಾಗಿದೆ ಎಂದರು. ಕೇವಲ ಡಾಕ್ಟರ್, ಇಂಜಿನಿಯರ್ ಪದವಿಯತ್ತ ಆಸಕ್ತಿ ತೋರುವ ಬದಲು, ಐ.ಎ.ಎಸ್., ಐ.ಪಿ.ಎಸ್.ನಂತಹ ಆಡಳಿತಾತ್ಮಕ ಹುದ್ದೆ ಪಡೆಯುವತ್ತ ಪೋಷಕರು ಮಕ್ಕಳನ್ನು ತಯಾರು ಮಾಡುವಂತೆ ಅವರು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇರಿಯ ಅಧ್ಯಕ್ಷ ಮಾದೆಯಂಡ ರವಿಕುಂಞಪ್ಪ ಅವರು ಕೇರಿಯ ಕಾರ್ಯಚಟುವಟಿಕೆ ಮುಂದಿನ ಯೋಜನೆಗಳ ಬಗ್ಗೆ ವಿವರವಿತ್ತರು. ನಿವೃತ್ತ ತಹಶೀಲ್ದಾರ್ ತಾಪಂಡ ಸಿ. ತಮ್ಮಯ್ಯ, ಮಂಡೇಪಂಡ ರತನ್ ಕುಟ್ಟಯ್ಯ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಸಭಾ ಕಾರ್ಯಕ್ರಮಕ್ಕೆ ಮುನ್ನ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ವೇದಿಕೆಯಲ್ಲಿ ಕೇರಿಯ ಮುಖ್ಯಸ್ಥ ಡಾ. ಕೋದಂಡ ದೇವಯ್ಯ, ಉಪಾಧ್ಯಕ್ಷೆ ಕೂಪದಿರ ಸುಂದರಿ ಮಾಚಯ್ಯ, ಕಾರ್ಯದರ್ಶಿ ಮೇವಡ ನಾಣಯ್ಯ, ಖಜಾಂಚಿ ಬೊಳಂದಂಡ ಅಪ್ಪಣ್ಣ ಸೇರಿದಂತೆ ಕೇರಿಯ ಪದಾಧಿಕಾರಿಗಳು ಹಾಜರಿದ್ದರು. ಸುನಿಲ್ ಸುಬ್ರಮಣಿ, ಅನೂಪ್ ಮಾದಪ್ಪ ಸೇರಿದಂತೆ ಕೇರಿಯ ಹಿರಿಯರಾದ ಬೊಳಕಾರಂಡ ಸೋಮಯ್ಯ, ಪಳಂಗೇಟಿರ ಮುದ್ದವ್ವ ಅವರನ್ನು ಸನ್ಮಾನಿಸಲಾಯಿತು. ಬೆಳಿಗ್ಗೆ ಕಾವೇರಿ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬಯವಂಡ ಪ್ರೇಮಾ ಅಯ್ಯಪ್ಪ ಪ್ರಾರ್ಥಿಸಿ, ಕುಂಞರ ಸೋಮಯ್ಯ ಸ್ವಾಗತಿಸಿದರು. ಮಾದೇಟಿರ ಬೆಳ್ಯಪ್ಪ ಕಾರ್ಯಕ್ರಮ ನಿರೂಪಿಸಿ ಮೇವಡ ನಾಣಯ್ಯ ವಂದಿಸಿದರು. ಪಳಂಗಂಡ ಸಬಿತಾ ಹಾಗೂ ಕಾಳೇಂಗಡ ಕಸ್ತೂರಿ ಅತಿಥಿ ಪರಿಚಯ ಮಾಡಿದರು.

ಸಾಂಸ್ಕøತಿಕ ರಂಗು

ಅಪರಾಹ್ನ ಕೋಲಾಟ್, ಉಮ್ಮತ್ತಾಟ್, ಬೊಳಕಾಟ್, ಕೊಡವ ಹಾಡು ಸ್ಪರ್ಧೆ ಸೇರಿದಂತೆ ಸಾಂಸ್ಕøತಿಕ ಪ್ರದರ್ಶನ ನೆರವೇರಿತು.