ಸೋಮವಾರಪೇಟೆ, ಡಿ.28: ವಿದ್ಯುತ್ ಕಂಬಗಳ ಮೂಲಕ ಕೇಬಲ್ಗಳನ್ನು ಅಳವಡಿಸಿದ್ದರೆ ಸಂಬಂಧಿಸಿದವರಿಂದ ಪ್ರತಿ ಕಂಬಕ್ಕೆ ರೂ. 150 ಶುಲ್ಕ ವಸೂಲಿ ಮಾಡಬೇಕು. ಮುಂದಿನ 3 ದಿನಗಳ ಒಳಗೆ ನೋಟೀಸ್ ನೀಡಿ ಕ್ರಮ ಕೈಗೊಳ್ಳಬೇಕೆಂದು ವಿದ್ಯುತ್ ಇಲಾಖಾ ಅಭಿಯಂತರರಿಗೆ ಚಾಮರಾಜನಗರ ಮತ್ತು ಕೊಡಗು ಜಿಲ್ಲಾ ಅಧೀಕ್ಷಕ ಇಂಜಿನಿಯರ್ ಕೆ. ರಾಮಚಂದ್ರ ಸೂಚಿಸಿದರು.
ಇಲ್ಲಿನ ಇಲಾಖಾ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದರು.
ಹಣ ಪಾವತಿಸಲು ನಿರಾಕರಿಸಿದರೆ ಯಾವದೇ ಮುಲಾಜಿಗೆ ಒಳಗಾಗದೇ ಕೇಬಲ್ಗಳನ್ನು ಕಿತ್ತು ಹಾಕಿ. ಈ ಬಗ್ಗೆ ಆಕ್ಷೇಪಿಸಿದರೆ ಪೊಲೀಸ್ ದೂರು ನೀಡಿ ಎಂದು ರಾಮಚಂದ್ರ ಅವರು ನಿರ್ದೇಶಿಸಿದರು.
ಹಾನಗಲ್ಲು ಬಾಣೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಾರ್ಯಪಾಲಕ ಅಭಿಯಂತರರ ಕಚೇರಿ, ವಿದ್ಯುತ್ ಪ್ರಸರಣಾ ಘಟಕ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಬೇಕೆಂದು ಸಭೆಯಲ್ಲಿದ್ದ ಸಲಹಾ ಸಮಿತಿ ಸದಸ್ಯರಾದ ಪ್ರಸನ್ನ ಮತ್ತು ಎಂ.ಪಿ. ಧರ್ಮ ಹೇಳಿದರು.
ಈ ಸಂಬಂಧಿತ ಕಡತ ತಹಶೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿದ್ದು, ಕಡತ ಬಂದೊಡನೇ ಕ್ರಮ ವಹಿಸಲಾಗುವದು ಎಂದು ಎಇಇ ಅಶೋಕ್ ತಿಳಿಸಿದರು.
ಇಲಾಖೆಗೆ ಸಂಬಂಧಿಸಿದ ಕಡತ ವಿಲೇವಾರಿಗೆ ತಹಶೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿಗಳು ವಿಳಂಬಧೋರಣೆ ಅನುಸರಿಸು ತ್ತಿರುವದು ಸರಿಯಲ್ಲ. ಅಧಿಕಾರಿಗಳು ಸುಖಾ ಸುಮ್ಮನೆ ಅಲೆದಾಡಿಸುತ್ತಿರು ವದು ಸಮಂಜಸವಲ್ಲ. ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳಿಗೆ ಪತ್ರ ಬರೆಯಿರಿ ಎಂದು ಪ್ರಸನ್ನ ಅವರು ಸಲಹೆ ನೀಡಿದರು.
ಬಜೆಗುಂಡಿ ಗ್ರಾಮದಲ್ಲಿ 11 ವಿದ್ಯುತ್ ಕಂಬಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ಬದಲಾವಣೆ ಮಾಡುವಂತೆ ಗ್ರಾಮಸ್ಥರಾದ ಪ್ರಶಾಂತ್ ಮನವಿ ಮಾಡಿದರು. ಹೊಲದಲ್ಲಿ ತೆಗೆದಿರುವ ಬೋರ್ವೆಲ್ಗೆ ವಿದ್ಯುತ್ ಸಂಪರ್ಕ ನೀಡಲು ವಿಳಂಬ ಮಾಡುತ್ತಿರುವ ಬಗ್ಗೆ ಹೊಸಳ್ಳಿ ಗ್ರಾಮದ ಸುರೇಶ್ ಮನವಿ ಪತ್ರ ಸಲ್ಲಿಸಿದರು.
ಇಲ್ಲಿನ ಕ್ಲಬ್ರಸ್ತೆಯಲ್ಲಿರುವ ವಿದ್ಯುತ್ ಕಂಬಕ್ಕೆ ಮೂರು ತಿಂಗಳ ಹಿಂದೆ ಕಾರು ಡಿಕ್ಕಿಯಾಗಿ ಅಪಾಯಕಾರಿ ಸ್ಥಿತಿಗೆ ತಲುಪಿದ್ದರೂ ಇಂದಿಗೂ ಬದಲಾಯಿಸದ ಬಗ್ಗೆ ಸಂತೋಷ್ಕುಮಾರ್ ರೈ ಸಭೆಯ ಗಮನ ಸೆಳೆದರು. ಕಾರಿನ ಮಾಲೀಕರಿಂದ ಹಣ ವಸೂಲಿ ಮಾಡಿದ್ದರೂ ಸಹ ಕ್ರಮ ಕೈಗೊಳ್ಳದ ಬಗ್ಗೆ ಬೊಟ್ಟು ಮಾಡಿದರು.
ಇದರೊಂದಿಗೆ ಮಾರ್ಕೆಟ್ ರಸ್ತೆಯಲ್ಲಿರುವ ನೀರಿನ ಟ್ಯಾಂಕ್ ಸಮೀಪ ಬಿಎಸ್ಎನ್ಎಲ್ ಕಂಬ ವಿದ್ಯುತ್ ತಂತಿಗೆ ತಾಕುತ್ತಿದ್ದರೂ ನಿರ್ಲಕ್ಷ್ಯವಹಿಸಲಾಗಿದೆ. ಜೀವ ಹಾನಿಯಾಗುವ ಅಪಾಯವಿದೆ ಎಂದು ಸಂತೋಷ್ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧೀಕ್ಷಕ ಅಭಿಯಂತರ ರಾಮಚಂದ್ರ, ಮುಂದಿನ ಮೂರು ದಿನಗಳ ಒಳಗೆ ಕಂಬಗಳ ಬದಲಾವಣೆಗೆ ಕ್ರಮ ವಹಿಸಿ ತಮಗೆ ವರದಿ ಸಲ್ಲಿಸಬೇಕೆಂದು ಕಿರಿಯ ಅಭಿಯಂತರರಿಗೆ ನಿರ್ದೇಶನ ನೀಡಿದರು.
ಹೊಸತೋಟದಲ್ಲಿ ವಿದ್ಯುತ್ ಕಂಬ ಬೀಳುವ ಸ್ಥಿತಿಯಲ್ಲಿದೆ. ಪ್ರಾಣಹಾನಿಯಾಗುವ ಮೊದಲು ಕ್ರಮವಹಿಸಬೇಕು ಎಂದು ಧರ್ಮ ಅವರು ಅಭಿಯಂತರರಿಗೆ ತಿಳಿಸಿದರು.
ಸಭೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಎನ್. ತಾರಾ,
ಬಿ. ಸೋಮಶೇಖರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಅಶೋಕ್, ಲೆಕ್ಕಾಧಿಕಾರಿ ವಿ.ಎಂ. ನಾಗರಾಜು, ಅಭಿಯಂತರ ಪಿ.ಎನ್. ದೇವಯ್ಯ, ಆಲ್ಫೋನ್ಸ್ ಉಪಸ್ಥಿತರಿದ್ದರು.
ಬೇಳೂರು ಗ್ರಾ.ಪಂ. ಮಾಜೀ ಅಧ್ಯಕ್ಷ ಬಸವರಾಜು, ದೊಡ್ಡ ಹಣಕೋಡು ಗಣೇಶ್ ಸೇರಿದಂತೆ ಸಾರ್ವಜನಿಕರು ಸಭೆಯಲ್ಲಿ ಉಪಸ್ಥಿತರಿದ್ದು, ಇಲಾಖಾ ವ್ಯಾಪ್ತಿಗೆ ಒಳಪಡುವ ಕುಂದುಕೊರತೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.