ಶ್ರೀಮಂಗಲ, ಡಿ. 28 : ಪೊನ್ನಂಪೇಟೆ ತಾಲೂಕು ಪುನರಚನೆಗೆ ಆಗ್ರಹಿಸಿ 58ನೇ ದಿನದ ಧರಣಿ ಸತ್ಯಾಗ್ರಹದಲ್ಲಿ ಕೊಡಗು ಜಿಲ್ಲಾ ಅಂಗನವಾಡಿ ನೌಕರರ ಸಂಘದಿಂದ ಬೆಂಬಲ ವ್ಯಕ್ತಪಡಿಸಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.
ಈ ಸಂದರ್ಭ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಕೆ.ಪಿ.ಕಾವೇರಮ್ಮ ಮಾತನಾಡಿ, ಪೊನ್ನಂಪೇಟೆ ತಾಲೂಕು ಆಗುವವರೆಗೆ ಮುಖ್ಯಮಂತ್ರಿಗಳ ನಿವಾಸದ ಎದುರು ಪ್ರತಿಭಟನೆ ನಡೆಸಿ ಸರಕಾರದ ಮೇಲೆ ಒತ್ತಡ ಹೇರಬೇಕಾಗಿದೆ ಎಂದರು.
ಸಮಿತಿ ಸಂಚಾಲಕ ಮಾಚಿಮಾಡ ರವೀಂದ್ರ ಮಾತನಾಡಿ ಜಿಲ್ಲೆಗೆ ಜನವರಿ 9ಕ್ಕೆ ಮುಖ್ಯಮಂತ್ರಿಗಳು ಆಗಮಿಸಲಿದ್ದು, ಜಿಲ್ಲೆಯ ಎರಡು ತಾಲೂಕು ಘೋಷಣೆಯಾಗುವ ಆಶಾಭಾವನೆ ಇದೆ. ಒಂದು ವೇಳೆ ಈ ಸಂದರ್ಭ ಘೋಷಣೆ ಮಾಡದಿದ್ದರೆ ಎರಡನೇ ಹಂತದಲ್ಲಿ ತೀವ್ರತರದ ಪ್ರತಿಭಟನೆ ನಡೆಯಲಿದೆ ಎಂದು ಎಚ್ಚರಿಸಿದರು. ವಕೀಲ ಸಂದೇಶ ನೆಲ್ಲಿತ್ತಾಯ ಮಾತನಾಡಿ ತಾಲೂಕು ರಚನೆ ಮಾಡದಿದ್ದರೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ‘ನೋಟಾ’ಕ್ಕೆ ಮತ ಚಲಾಯಿಸುವಂತೆ ಕರೆ ನೀಡಿದರು.
ಈ ಸಂದರ್ಭ ಕೋಳೆರ ದಯ ಚಂಗಪ್ಪ, ಕಾಳಿಮಾಡ ಮೋಟಯ್ಯ, ಮೂಕಳೇರ ಕುಶಾಲಪ್ಪ, ಚೆಪ್ಪುಡಿರ ಪೊನ್ನಪ್ಪ, ಸೋಮಯ್ಯ, ಜಿಮ್ಮಿ ಅಣ್ಣಯ್ಯ, ಮತ್ರಂಡ ಅಪ್ಪಚ್ಚು ಅಂಗನವಾಡಿ ಹಿರಿಯ ಕಾರ್ಯಕರ್ತೆ ದೇವಮ್ಮ ಮತ್ತಿತರರು ಹಾಜರಿದ್ದರು.