ಮಡಿಕೇರಿ, ಡಿ. 28: ಕೊಡಗಿನ ಪೊನ್ನಂಪೇಟೆ ಹಾಗೂ ಕಾವೇರಿ ತಾಲೂಕು ಬೇಡಿಕೆಗಾಗಿ ಪ್ರಸಕ್ತ ನಡೆಸುತ್ತಿರುವ ಹೋರಾಟವನ್ನು ಉಭಯಕಡೆ ಕೈ ಬಿಡಬೇಕೆಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಜನತೆಗೆ ಕರೆ ನೀಡಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ರಾಜ್ಯದಲ್ಲಿ ಘೋಷಣೆಯಾಗಿರುವ 50 ತಾಲೂಕುಗಳು ಮಾತ್ರ ತಕ್ಷಣದಿಂದ ಅನುಷ್ಠಾನಗೊಳ್ಳಲಿರುವದಾಗಿ ಸ್ಪಷ್ಪಪಡಿಸಿದರು.
ರಾಜ್ಯ ಸರಕಾರ ಈ ಮೊದಲು ಹೊಸ ತಾಲೂಕುಗಳನ್ನು ಪ್ರಕಟಿಸುವ ಮುನ್ನ ಕೊಡಗಿನ ಯಾರೊಬ್ಬರೂ ಪ್ರತ್ಯೇಕ
(ಮೊದಲ ಪುಟದಿಂದ) ತಾಲೂಕು ಬೇಡಿಕೆ ಸಲ್ಲಿಸಿರಲಿಲ್ಲವೆಂದು ಪುನರುಚ್ಚರಿಸಿದ ಸಚಿವರು, ಈ ಬಗ್ಗೆ ಬೆಳಗಾವಿ ಅಧಿವೇಶನ ಹಾಗೂ ಇತರ ಸಂದರ್ಭಗಳಲ್ಲಿ ನಾಲ್ಕೈದು ಬಾರಿ ಮುಖ್ಯಮಂತ್ರಿಗಳ ಬಳಿ ನಿಯೋಗ ಬಂದಿದ್ದಾಗ ಸ್ಪಷ್ಟಪಡಿಸಿದ್ದಾಗಿಯೂ ಅವರು ನೆನಪಿಸಿದರು.
ಆ ಬಳಿಕವೂ ಹೋರಾಟ ನಡೆಸುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು ಈಗಿನಿಂದಲೇ ಹೋರಾಟವನ್ನು ಕೈ ಬಿಡುವಂತೆಯೂ, ಜನವರಿ 9ರಂದು ಮತ್ತೊಮ್ಮೆ ಮುಖ್ಯಮಂತ್ರಿಗಳಿಂದ ಈ ಬಗ್ಗೆ ಹೋರಾಟ ನಡೆಸುತ್ತಿರುವ ಪ್ರಮುಖರಿಗೆ ಸ್ಪಷ್ಟ ಹೇಳಿಕೆ ಕೊಡಿಸುವದಾಗಿಯೂ ಸಚಿವರು ಭರವಸೆ ನೀಡಿದರು.
ಈಗಿನ ಪರಿಸ್ಥಿತಿಯಲ್ಲಿ ಹೊಸ ತಾಲೂಕು ಬೇಡಿಕೆಯ ಪರಿಗಣನೆ ಸಾಧ್ಯವಾಗದು ಎಂದು ಸೀತಾರಾಂ ವಿವರಿಸಿದರು.
ರೈಲ್ವೇಗೆ ವಿರೋಧ : ಕೊಡಗು ಜಿಲ್ಲೆಯೊಳಗೆ ಇಲ್ಲಿನ ಪರಿಸರಕ್ಕೆ ಹಾನಿಯೊಡ್ಡುವಂತಹ ರೈಲ್ವೇ ಯೋಜನೆಗೆ ತಮ್ಮ ವಿರೋಧವಿದೆ ಎಂದು ಪುನರುಚ್ಚರಿಸಿದ ಸಚಿವರು ಸಂಸದ ಪ್ರತಾಪಸಿಂಹ ಹೇಳಿಕೆಯಂತೆ ಕುಶಾಲನಗರ ತನಕ ಕೂಡ ಕೊಡಗು ಜಿಲ್ಲೆಯೊಳಗೆ ರೈಲ್ವೇ ಯೋಜನೆಗೆ ತಾವು ಉಸ್ತುವಾರಿ ಸಚಿವರಾಗಿ ಅವಕಾಶ ಕೊಡುವದಿಲ್ಲವೆಂದು ಸ್ಪಷ್ಟಪಡಿಸಿದರು. ಕೊಡಗಿನ ಮರಗಳು ಮತ್ತು ಪರಿಸರ ಹಾನಿಯಾಗದಂತೆ ರಸ್ತೆ ಅಭಿವೃದ್ಧಿಯನ್ನು ತಾವು ಸ್ವಾಗತಿಸುವದಾಗಿಯೂ ಮಾರ್ನುಡಿದರು.