ಕುಶಾಲನಗರ, ಡಿ. 28: ಕುಶಾಲನಗರ ಪಟ್ಟಣ ಪಂಚಾಯ್ತಿಯ ಕಛೇರಿಯನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲು ಪಂಚಾಯ್ತಿಯ ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ. ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ರೇಣುಕಾ ಅಧ್ಯಕ್ಷತೆಯಲ್ಲಿ ಪಂಚಾಯ್ತಿಯ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು ಸದ್ಯದಲ್ಲಿಯೇ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆಯಲ್ಲಿರುವ ಸತ್ಯಸಾಯಿ ಕಾಲೇಜು ಕಟ್ಟಡಕ್ಕೆ ಸ್ಥಳಾಂತರಿಸುವ ಹಿನ್ನೆಲೆಯಲ್ಲಿ ಸಭೆ ಬಾಡಿಗೆ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಿತು.

ಪ್ರಸಕ್ತ ಸ್ಥಳದಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಸರಕಾರ ಅನುಮತಿ ನೀಡಿದ್ದು ಈ ಹಿನ್ನೆಲೆಯಲ್ಲಿ ಕಳೆದ 6 ದಶಕಗಳ ಕಾಲ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಆವಾಸಸ್ಥಾನವಾಗಿದ್ದ ಕಟ್ಟಡವನ್ನು ತೆರವುಗೊಳಿಸಲು ಸಭೆಯಲ್ಲಿ ಅನುಮೋದನೆ ನೀಡಿತು.

ಇದರೊಂದಿಗೆ ಪ್ರಥಮ ಹಂತದಲ್ಲಿ ರಂಗಮಂದಿರ, ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿ ಹಾಗೂ ಕೆಲವು ಕಟ್ಟಡಗಳನ್ನು ತೆರವುಗೊಳಿಸುವದರೊಂದಿಗೆ ಬದಲೀ ವ್ಯವಸ್ಥೆ ಕಲ್ಪಿಸಲು ಚರ್ಚೆ ನಡೆಯಿತು. ಲೈಬ್ರರಿ ಕಛೇರಿಗು ಕೂಡ ಪರ್ಯಾಯ ವ್ಯವಸ್ಥೆಗೆ ಕ್ರಮಕೈಗೊಳ್ಳುವದು ಉಳಿದಂತೆ ನ್ಯಾಯಾಲಯದ ಆದೇಶದಂತೆ ಮಾರ್ಚ್ 20 ರ ಒಳಗೆ ಎಲ್ಲಾ ಕಟ್ಟಡಗಳ ತೆರವು ಕಾರ್ಯ ನಡೆಯಲಿದೆ ಎಂದು ಸಭೆಯಲ್ಲಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಮಾಹಿತಿ ನೀಡಿದರು.

ಸಭೆಯಲ್ಲಿ ರಾಜೀವ್‍ಗಾಂಧಿ ವಸತಿ ಯೋಜನೆಯಡಿ ಗುಂಪು ಮನೆಗಳನ್ನು ನಿರ್ಮಿಸಲು ಡಿಪಿಆರ್ ತಯಾರಿಸಲು ಟೆಂಡರ್ ಕರೆಯುವ ಬಗ್ಗೆ ಚರ್ಚಿಸಲಾಗಿ, ಸದಸ್ಯರು ಬಡವರಿಗೆ, ನಿರ್ಗತಿಕರಿಗೆ ಹಾಗೂ ವಿಶೇಷವಾಗಿ ತನ್ನ ವಾರ್ಡ್‍ನಲ್ಲಿ ಆದ್ಯತೆ ಕಲ್ಪಿಸುವಂತೆ ಸದಸ್ಯ ಪ್ರಮೋದ್ ಮುತ್ತಪ್ಪ ಸಭೆಯ ಗಮನಕ್ಕೆ ತಂದರು.

ಈ ಸಂದರ್ಭ ಉಪಾಧ್ಯಕ್ಷ ಟಿ.ಆರ್. ಶರವಣಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಹೆಚ್.ಕೆ. ಪಾರ್ವತಿ, ಸದಸ್ಯರಾದ ಹೆಚ್.ಜೆ. ಕರಿಯಪ್ಪ, ಸುರಯ್ಯಭಾನು, ಫಜಲುಲ್ಲ, ಮಧುಸೂದನ್, ಎಂ.ಎಂ.ಚರಣ್, ರಶ್ಮಿ ಅಮೃತ್, ಲಲಿತಾ, ಕವಿತಾ ಇದ್ದರು.