ಮಡಿಕೇರಿ, ಡಿ. 28: ಇದೇನಿದು... ಪೊಲೀಸ್ ಇನ್ಸ್‍ಪೆಕ್ಟರ್‍ಗಳಿಗೆ ಈ ಪರಿಸ್ಥಿತಿ ಎದುರಾಯಿತೇ. ಏನು ಎಸೆದರು.. ಏಕೆ ನೆಗೆದರು, ಯಾತಕ್ಕಾಗಿ ಓಡಿದರು. ದುಷ್ಕರ್ಮಿಗಳು ಏನಾದರೂ ತೊಂದರೆ ಮಾಡಿದರೇ. ಅಲ್ಲ ಬಾಂಬ್ ಪತ್ತೆಯಾಯಿತೇ.. ಅದೂ ಮಡಿಕೇರಿ ನಗರ ಮಾತ್ರವಲ್ಲ ಜಿಲ್ಲೆಯಾದ್ಯಂತ ಪ್ರವಾಸಿಗರು ತುಂಬಿ ತುಳುಕುತ್ತಿರುವ ಈ ವರ್ಷಾಂತ್ಯದಲ್ಲಿ ಏನಾಯಿತು ಎಂದು ಅಚ್ಚರಿ ಪಡಬೇಡಿ... ಇದು ಪೊಲೀಸರ ವಾರ್ಷಿಕ ಕ್ರೀಡಾ ಹಬ್ಬದಲ್ಲಿ ಇನ್ಸ್‍ಪೆಕ್ಟರ್ ಒಬ್ಬರು ಮಾಡಿರುವ ಸಾಧನೆ.
ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಪೊಲೀಸ್ ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲದ ವಾರ್ಷಿಕ ಕ್ರೀಡಾಕೂಟ ಆರಂಭಗೊಂಡಿದ್ದು, ಪ್ರತಿನಿತ್ಯ ಕೆಲಸದ ಒತ್ತಡದಲ್ಲಿರುವ ಪೊಲೀಸರು ಒಂದಷ್ಟು ನಿರಾಳರಾಗಿ ಸಂಭ್ರಮಿಸುತ್ತಿದ್ದಾರೆ. ಇಲ್ಲಿ ಅಧಿಕಾರಿಗಳು... ಸಿಬ್ಬಂದಿಗಳು ಎಂಬ ಭೇದಭಾವವಿಲ್ಲದೆ ಎಲ್ಲರೂ ಕ್ರೀಡೆಯನ್ನು ಆಸ್ವಾದಿಸುತ್ತಿದ್ದಾರೆ. ಪ್ರತಿನಿತ್ಯ ಸಲ್ಯೂಟ್ ಹೊಡೆಯುವ ಸಿಬ್ಬಂದಿಗಳು... ಸಲ್ಯೂಟ್ ಹೊಡೆಸಿಕೊಳ್ಳುವ ಅಧಿಕಾರಿಗಳು ಅಧಿಕಾರದ ಹಂತವನ್ನು ಬಿಟ್ಟು ಮೈದಾನದಲ್ಲಿ ಪರಸ್ಪರ ಉತ್ತೇಜನ ‘ಹೈಫೈ’ ಮೂಲಕ ಎಂಜಾಯ್ ಮಾಡುತ್ತಿದ್ದಾರೆ. ಅಧಿಕಾರಿಗಳಿಂದ ಸಾಧಕರಿಗೆ ಬಹುಮಾನವೂ ಘೋಷಣೆಯಾಗುತ್ತಿದೆ. ಸಿಬ್ಬಂದಿಗಳ ಆಟಕ್ಕೆ ಅಧಿಕಾರಿಗಳು ಮೈಕ್ ಹಿಡಿದು ವೀಕ್ಷಕ ವಿವರಣೆಯ ಮೂಲಕ ರಂಜನೆ ನೀಡುತ್ತಿದ್ದು, ತಾ. 30ರ ತನಕ ಈ ಸಂಭ್ರಮ ಮುಂದುವರಿಯಲಿದೆ.
ಇಂದು ನಡೆದ ಕ್ರೀಡಾಕೂಟದಲ್ಲಿ ಅಧಿಕಾರಿಗಳ ಮಟ್ಟದ ಸ್ಪರ್ಧೆಯಲ್ಲಿ ವೃತ್ತ ನಿರೀಕ್ಷಕರ ವಿಭಾಗದಲ್ಲಿ ಡಿಸಿಆರ್‍ಬಿಯ ಇನ್ಸ್‍ಪೆಕ್ಟರ್ ಎಂ.ಎಂ. ಭರತ್ ಅವರು ಭಾರದ ಗುಂಡು ಎಸೆತ, ಉದ್ದ ಜಿಗಿತ (ಲಾಂಗ್ ಜಂಪ್) ಹಾಗೂ ನೂರು ಮೀಟರ್ ಓಟದ ಸ್ಪರ್ಧೆ ಈ ಮೂರೂ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸುವ ಮೂಲಕ ಉತ್ತಮ ಸಾಧನೆ ತೋರಿದರು. ಇವರೊಂದಿಗೆ ಜಿಲ್ಲೆಯ ಇನ್ನೋರ್ವ ವೃತ್ತ ನಿರೀಕ್ಷಕರಾಗಿರುವ ರಾಜ್ಯ ಗುಪ್ತದಳ ಕೊಡಗು ಘಟಕದ ಅನೂಪ್ ಮಾದಪ್ಪ ಅವರು ಈ ಮೂರು ವಿಭಾಗದಲ್ಲೂ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಮಡಿಕೇರಿ ವೃತ್ತ ನಿರೀಕ್ಷಕ ಐ.ಪಿ. ಮೇದಪ್ಪ 100 ಮೀಟರ್ ಓಟದಲ್ಲಿ ತೃತೀಯ ಸ್ಥಾನದ ಸಾಧನೆ ಮಾಡಿದರು. ಲಾಂಗ್‍ಜಂಪ್ ಹಾಗೂ ಭಾರದ ಗುಂಡು ಎಸೆತದಲ್ಲಿ ಡಿಎಆರ್‍ನ ಇನ್ಸ್‍ಪೆಕ್ಟರ್ ತಿಮ್ಮಪ್ಪಗೌಡ ತೃತೀಯ ಸ್ಥಾನ ಪಡೆದರು.
ಎಎಸ್‍ಐ ಹಾಗೂ ಪಿಎಸ್‍ಐ ಮಟ್ಟದ ಸ್ಪರ್ಧೆಯಲ್ಲಿ 100 ಮೀಟರ್ ಓಟದಲ್ಲಿ ನಿಸ್ತಂತು ಘಟಕದ ಎಎಸ್‍ಐ ಎ.ಕೆ. ಗಣಪತಿ ಪ್ರಥಮ, ಡಿಎಆರ್‍ನ ಎ.ಆರ್.ಎಸ್.ಐ. ಜಿತೇಂದ್ರ ರೈ ದ್ವಿತೀಯ ಹಾಗೂ ಆರ್‍ಎಸ್‍ಐ ಮಹೇಶ್ ತೃತೀಯ ಸ್ಥಾನ ಗಳಿಸಿದರು. ಇದೇ ವಿಭಾಗದ ಭಾರದ ಗುಂಡು ಎಸೆತದಲ್ಲಿ ವೀರಾಜಪೇಟೆ ಡಿವೈಎಸ್‍ಪಿ ಕಚೇರಿಯ ಎಎಸ್‍ಐ ಚಿಣ್ಣಪ್ಪ ಪ್ರಥಮ, ಡಿಎಆರ್‍ನ ಆರ್‍ಎಸ್‍ಐ ಮಹೇಶ್ ದ್ವಿತೀಯ ಹಾಗೂ ಜಿತೇಂದ್ರ ರೈ ತೃತೀಯ ಬಹುಮಾನ ಗಳಿಸಿದರು. ಸಿಬ್ಬಂದಿಗಳ 800 ಮೀಟರ್ ಓಟದಲ್ಲಿ ವಿಶೇಷ ಘಟಕದ ಗಿರೀಶ್ ಎಂ.ಎ. ಶ್ರೀಮಂಗಲ ಠಾಣೆಯ ಸ್ವಾಮಿ ಕೆ.ಕೆ. ಹಾಗೂ ನಗರ ಟ್ರಾಫಿಕ್ ಠಾಣೆಯ ಕುಮಾರ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.
ಮಹಿಳಾ ವಿಭಾಗದ ಲಾಂಗ್‍ಜಂಪ್‍ನಲ್ಲಿ ಕುಟ್ಟದ ಯಶೋಧ, ಸೋಮವಾರಪೇಟೆ ವೃತ್ತ ನಿರೀಕ್ಷಕರ ಕಚೇರಿಯ ಶಶಿಕಲಾ ಹಾಗೂ ಕುಟ್ಟದ ಸೌಮ್ಯ ಬಹುಮಾನ ಪಡೆದರು.
ಭಾರದ ಗುಂಡು ಎಸೆತದಲ್ಲಿ ಟ್ರಾಫಿಕ್ ಠಾಣೆಯ ಭವ್ಯ, ಸೋಮವಾರಪೇಟೆಯ ಶಶಿಕಲಾ ಹಾಗೂ ಕುಶಾಲನಗರದ ಎ.ಎಸ್.ಐ. ಖತೀಜ ಸಾಧನೆ ಮಾಡಿದರು.
ಅಥ್ಲೆಟಿಕ್ಸ್‍ನೊಂದಿಗೆ ಇಂದು ಕಬಡ್ಡಿ, ವಾಲಿಬಾಲ್ ಹಾಗೂ ಕ್ರಿಕೆಟ್ ಪಂದ್ಯದ ಆರಂಭಿಕ ಸ್ಪರ್ಧೆಗಳು, ಆರಂಭಗೊಂಡವು. ಶೂಟಿಂಗ್ ಸೇರಿದಂತೆ ಇತರ ಸ್ಪರ್ಧೆಗಳು ತಾ. 29 ರಂದು (ಇಂದು) ನಡೆಯಲಿದೆ.
ಮಡಿಕೇರಿ, ವೀರಾಜಪೇಟೆ ಹಾಗೂ ಕುಶಾಲನಗರ ಉಪ ವಿಭಾಗ, ಡಿಎಆರ್, ವಿಶೇಷ ಘಟಕ ಹಾಗೂ ಮಹಿಳಾ ಘಟಕದ ನಡುವೆ ವಿವಿಧ ಸ್ಪರ್ಧೆಗಳೊಂದಿಗೆ ಕ್ರೀಡಾಕೂಟ ನಡೆಯುತ್ತಿದೆ.
-ಶಶಿ ಸೋಮಯ್ಯ