ಮಡಿಕೇರಿ, ಡಿ.28 : ಪ್ರವಾಸೋದ್ಯಮ ಜಿಲ್ಲೆಯಾಗಿರುವ ಕೊಡಗಿನ ಕೇಂದ್ರ ಸ್ಥಳ ಮಡಿಕೇರಿಯ ರಸ್ತೆಗಳು ಮತ್ತು ನಗರಸಭೆ ಕಾರ್ಯವೈಖರಿ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿರುವ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಇಲ್ಲಿ ಎಲ್ಲ ಪಕ್ಷದವರು ಒಂದೇ ಎಂದು ಸೂಚ್ಯವಾಗಿ ನುಡಿದರು. ಮಡಿಕೇರಿಯ ಜನತೆ ಚುನಾಯಿಸಿ ಕಳುಹಿಸಿರುವಾಗ ಜನಪ್ರತಿನಿಧಿಗಳಾದವರು ಆಶೋತ್ತರಗಳಿಗೆ ಸ್ಪಂದಿಸುವದು ಕರ್ತವ್ಯವೆಂದು ಸಚಿವರು ಜನಪ್ರತಿನಿಧಿಗಳಿಗೆ ನೆನಪಿಸಿದರು.

ಜನತೆಯ ಕೆಲಸ ಕಾರ್ಯಗಳಿಗೆ ಒಲವು ತೋರುವ ಮೂಲಕ, ರಸ್ತೆಯಂತಹ ಅಭಿವೃದ್ಧಿ ಕೈಗೊಳ್ಳದಿದ್ದರೆ, ಜನಪ್ರತಿನಿಧಿಗಳು ಯಾವ ಪಕ್ಷದವರಾದರೂ ಮುಂದೆ ಜನರೇ ಪಾಠ ಕಲಿಸುವದಾಗಿ ಎಂ.ಆರ್. ಸೀತಾರಾಂ ಭವಷ್ಯ ನುಡಿದರು.

ಜಿಲ್ಲಾ ಕೇಂದ್ರ ರಸ್ತೆಗಳಲ್ಲಿ ಸಂಚರಿಸುವಾಗ ಕೆಲಸ ಮಾಡದ ಆಡಳಿತ ಮಂಡಳಿಯನ್ನು ವಿಸರ್ಜಿಸಿದರೆ ಒಳಿತು ಎಂಬ ಜನತೆಯ ಅಭಿಪ್ರಾಯವನ್ನು ಬೆಂಬಲಿಸಬೇಕಾದೀತು ಎಂದರಲ್ಲದೆ, ಆ ಹೊಣೆಗಾರಿಕೆ ತಮ್ಮದಲ್ಲವೆಂದು ಮಾರ್ನುಡಿಯುತ್ತಾ; ಇನ್ನಾದರೂ ಎಚ್ಚೆತ್ತುಕೊಂಡು ಸರಕಾರ ಬಿಡುಗಡೆಗೊಳಿಸಿರುವ ಹಣದಲ್ಲಿ ಒಳ್ಳೆಯ ಕೆಲಸ ಮಾಡಲೆಂದು ಆಶಿಸಿದರು.

ಹಿರಿಯರಿಗೆ ಪ್ರಾತಿನಿಧ್ಯ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ ಹಿರಿತನದೊಂದಿಗೆ ಪಿ.ಕೆ. ಪೊನ್ನಪ್ಪ ಅವರಿಗೆ ಅಧ್ಯಕ್ಷ ಸ್ಥಾನ ಕಲ್ಪಿಸಿದ್ದು, ಸಾಹಿತಿ ಹಾಗೂ ಯುವಕ ರಮೇಶ್ ಉತ್ತಪ್ಪ ಅವರಿಗೆ ಉತ್ತಮ ಕೆಲಸ ಮಾಡಲೆಂದು ಉಪಾಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ ಎಂದು ಸಚಿವರು ಪತ್ರಕರ್ತರ ಪ್ರಶ್ನೆಗೆ ಸಮರ್ಥನೆ ನೀಡಿದರು.