ಗೋಣಿಕೊಪ್ಪಲು,ಡಿ.28: ಜನಾಂಗದ ಅಭಿವೃದ್ಧಿಪರ ಚಿಂತನೆ ಯೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಸಮಾಜಗಳು ಯಾವದೋ ರಾಜಕಾರಣಿಗಳ ಮುಖವಾಣಿಯಾಗಿ ಹೇಳಿಕೆ ಕೊಡುವದು ಸಮಂಜಸವಲ್ಲ. ಕೊಡವ ಸಮಾಜ, ಗೌಡ ಸಮಾಜ ಒಳಗೊಂಡಂತೆ ಜಿಲ್ಲೆಯಲ್ಲಿ ಹಲವು ಮೂಲನಿವಾಸಿ ಜನಾಂಗಗಳ ಸಮಾಜವಿದ್ದು ವಾರ್ಷಿಕ ಕ್ರೀಡಾಕೂಟ, ಹುತ್ತರಿ ಆಚರಣೆ, ಊರೋರ್ಮೆ, ಗುರುಕಾರೋಣರಿಗೆ ಪ್ರಾರ್ಥಿಸುವ ಕಾರ್ಯಕ್ರಮ, ವಿದ್ಯಾಸಂಸ್ಥೆ ನಡೆಸುವದು, ವಿದ್ಯಾರ್ಥಿ ವೇತನ ವಿತರಣೆ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ ಸಹಕರಿಸುವದು. ಜಿಲ್ಲೆಯ ಬೇರೆ ಬೇರೆ ಭಾಗದಲ್ಲಿ ವಾಸಿಸುತ್ತಿರುವ ಜನಾಂಗ ವನ್ನು ಒಂದೆಡೆ ಸೇರಿಸುವ ಮೂಲಕ ಒಗ್ಗಟ್ಟು ಹಾಗೂ ಪರಸ್ಪರ ಪರಿಚಯಿ ಸಲು ವೇದಿಕೆ ಕಲ್ಪಿಸುವದು ಸಮಾಜ ಗಳ ಕಾರ್ಯಕ್ರಮವಾಗಬೇಕು ಎಂದು ಎಫ್‍ಕೆಸಿಸಿಐನ ಪ್ರವಾಸೋದ್ಯಮ ವಿಭಾಗದ ಉಪಾಧ್ಯಕ್ಷ ಕೆ.ಬಿ. ಗಿರೀಶ್ ಗಣಪತಿ ಅಭಿಪ್ರಾಯಪm್ಟದ್ದಾರೆ.

ಗೋಣಿಕೊಪ್ಪಲಿನಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ಹಲವು ವರ್ಷಗಳಿಂದ ಸಾರ್ವತ್ರಿಕ ಚುನಾವಣೆ ಸಂದರ್ಭ ಕೊಡವ ಅಭ್ಯರ್ಥಿಗೆ ಟಿಕೆಟ್ ಕೊಡಿ, ಗೌಡ ಅಭ್ಯರ್ಥಿಗೆ ಟಿಕೆಟ್ ನೀಡಿ, ಬೆಂಬಲಿಸಿ ಎಂಬಂತೆ ಮತೀಯ ಭಿನ್ನಾಭಿಪ್ರಾಯ ಮೂಡಿಸುವ ಕೆಲಸವನ್ನು ಕೆಲವು ಸಮಾಜ ಮುಖಂಡರು ಹಾಗೂ ನಿರ್ದೇಶಕರು ಮಾಡುತ್ತಾ ಬಂದಿದ್ದಾರೆ. ಕಳೆದ ಹಲವು ಚುನಾವಣೆಗಳ ಅಂಕಿ ಅಂಶ ತೆಗೆದುಕೊಂಡಲ್ಲಿ ಕೊಡಗಿನ ಮತದಾರರು ಶೈಕ್ಷಣಿಕವಾಗಿ, ಪ್ರಗತಿಪರ ಚಿಂತನೆಯೊಂದಿಗೆ ಸೂಕ್ತ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಆಯ್ಕೆ ಮಾಡುತ್ತಾ ಬಂದಿದ್ದಾರೆ.

ಜಿಲ್ಲೆಯಲ್ಲಿ ಯಾವದೇ ಸಮಾಜವಿರಲಿ ಅಲ್ಲಿ ಎಲ್ಲ ರಾಜಕೀಯ ಪಕ್ಷದವರು ನಿರ್ದೇಶಕರು ಹಾಗೂ ಸದಸ್ಯರಾಗಿರುತ್ತಾರೆ. ಅಧ್ಯಕ್ಷರಾದವರಿಗೆ ಇದರ ಅರಿವು ಇರಬೇಕಾಗುತ್ತದೆ. ಜಿಲ್ಲೆಯಲ್ಲಿ ಜಾತೀಯ ರಾಜಕಾರಣ ವನ್ನು ಸಮಾಜದ ಅಧ್ಯಕ್ಷರು ಮಾಡದಿ ರಲಿ. ಇದರಿಂದ ಪುಟ್ಟ ಜಿಲ್ಲೆ ಕೊಡಗಿ ನಲ್ಲಿ ಅಶಾಂತಿಗೆ ಕಾರಣವಾಗುತ್ತದೆ. ಯಾವದೇ ವ್ಯಕ್ತಿಗೆ ಆಯಾ ಪಕ್ಷದ ಟಿಕೆಟ್ ನೀಡುವದು ಪಕ್ಷದ ಹೈಕಮಾಂಡ್‍ಗೆ ಬಿಟ್ಟ ವಿಚಾರ. ಇಲ್ಲಿ ಸಮಾಜದ ಮುಖಂಡರು ತಮಗಾಗದ ವ್ಯಕ್ತಿಯ ಬಗ್ಗೆ ಸೇಡು ತೀರಿಸಿಕೊಳ್ಳಲು ಸಮಾಜದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವದು ಉತ್ತಮ ಬೆಳವಣಿಗೆಯಲ್ಲ. ಒಂದು ಸಮಾಜಕ್ಕೆ ನಿವೇಶನ ಒದಗಿಸಲು, ಕಟ್ಟಡ ಕಟ್ಟಲು, ವಿದ್ಯಾಸಂಸ್ಥೆ ಬೆಳೆಸಲು ನಮ್ಮ ಹಿರಿಯರು ತುಂಬಾ ಶ್ರಮವಹಿಸಿದ್ದಾರೆ.

ಇದೀಗ ಕೇವಲ ಸಮಾಜದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡವರು ಸಮಾಜದ ಜನರ ಧ್ವನಿಯಾಗದೆ ಯಾವದೋ ರಾಜಕಾರಣಿಗಳ ಓಲೈಕೆಗೆ ಮುಂದಾಗಿ ಅಸಂಬದ್ಧ ಹೇಳಿಕೆ ನೀಡುವದು ಶಾಂತಿಪ್ರಿಯ ಕೊಡಗಿಗೆ ಕ್ಷೇಮಕರವಲ್ಲ. ಇದು ಸಮಾಜದ ಅಧ್ಯಕ್ಷರ ಕೆಲಸವೂ ಅಲ್ಲ. ಈ ನಿಟ್ಟಿನಲ್ಲಿ ಜವಾಬ್ದಾರಿಯುತ ಸ್ಥಾನಮಾನವನ್ನು ಹೊಂದಿರುವ ಅಧ್ಯಕ್ಷರು ಪಕ್ಷದ ಅಭ್ಯರ್ಥಿಯ ಮುಖವಾಣಿಯಾಗಿ ವರ್ತಿಸುವದನ್ನು ಖಂಡಿಸುವದಾಗಿ ತಿಳಿಸಿದ್ದಾರೆ.