ಮಡಿಕೇರಿ, ಡಿ. 26: ಕೊಡಗಿನ ಏಕೈಕ ಬೈತೂರಪ್ಪ ದೇವಾಲಯ ಎಂಬ ಹಿರಿಮೆ ಹೊಂದಿರುವ ಸುಂಠಿಕೊಪ್ಪ ಹೋಬಳಿ ಕೊಡಗರಳ್ಳಿ ಗ್ರಾಮದಲ್ಲಿರುವ ಶ್ರೀ ಬೈತೂರಪ್ಪ ಮತ್ತು ಪೊವ್ವದಿ ದೇವಾಲಯಗಳ ಪುನರ್‍ಪ್ರತಿಷ್ಠಾ 6ನೇ ವಾರ್ಷಿಕೋತ್ಸವ ಇತ್ತೀಚೆಗೆ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ವಿಧಿ ವಿಧಾನಗಳ ಸಹಿತ ಶತ ರುದ್ರಾಭಿಷೇಕ ಮತ್ತು ಚಂಡಿಕಾ ಹೋಮವನ್ನು ನೆರವೇರಿಸಲಾಯಿತು.

ಕ್ಷೇತ್ರದ ತಂತ್ರಿಗಳಾದ ವೇ|ಮೂ|ಶಿವರಾಮ್ ಭಟ್, ಅವರ ನೇತೃತ್ವದಲ್ಲಿ ವೇದಮೂರ್ತಿ ನರಸಿಂಹ ಭಟ್, ವೇದಮೂರ್ತಿ ಚಂದ್ರಶೇಖರ್ ಭಟ್ ಬೈತೂರಪ್ಪ ಪೊವ್ವದಿ ದೇವಾಲಯದ ಪ್ರಧಾನ ಅರ್ಚಕರಾದ ವೇದಮೂರ್ತಿ, ಭಾನು ಪ್ರಕಾಶ್ ಹಾಗೂ ತಂಡದವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಮಹಾ ಪೂಜೆಯ ಬಳಿಕ ತೀರ್ಥ ಪ್ರಸಾದ ವಿತರಣೆಯೊಂದಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕೊಕ್ಕಲೇರ ಎನ್. ಪೂಣಚ್ಚ, ಟ್ರಸ್ಟಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.