ಮಡಿಕೇರಿ, ಡಿ. 27: ಕರ್ನಾಟಕ ಸರಕಾರದ ಕೃಷಿ ಇಲಾಖೆ ಹಾಗೂ ಪ್ರಾಂತೀಯ ಸಹಕಾರ ಸಾವಯವ ಕೃಷಿ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ತಾ. 30 ಹಾಗೂ 31 ರಂದು ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡಂತೆ ಸಾವಯವ ಮತ್ತು ಸಿರಿಧಾನ್ಯಗಳ ಮೇಳ ಏರ್ಪಡಿಸಲಾಗಿದೆ. ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿವಸ ನಡೆಯಲಿರುವ ಮೇಳವನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಉದ್ಘಾಟಿಸಲಿದ್ದಾರೆ.
ತಾ. 30 ರಂದು ಬೆಳಿಗ್ಗೆ 11 ಗಂಟೆಗೆ ಆರಂಭಗೊಳ್ಳಲಿರುವ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ಎ. ಮಂಜು, ಕೃಷಿ ಸಚಿವ ಕೃಷ್ಣಭೈರೇಗೌಡ ಸೇರಿದಂತೆ ಶಾಸಕರು, ಸಂಸದರು, ಸ್ಥಳೀಯ ಸಂಘ-ಸಂಸ್ಥೆ ಪ್ರತಿನಿಧಿಗಳು, ಕೃಷಿ ತಜ್ಞರು, ರೈತ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ಕೊಡಗಿನ ಕೃಷಿಕರು ಭಾಗವಹಿಸಲಿದ್ದಾರೆ.
ನಮ್ಮ ನಡಿಗೆ ಸಾವಯವ ಕೃಷಿ ಹಾಗೂ ಸಿರಿಧಾನ್ಯದೆಡೆಗೆ ಎಂಬ ಧ್ಯೇಯದೊಂದಿಗೆ ನಡೆಯಲಿರುವ ಈ ಎರಡು ದಿನಗಳ ಮೇಳದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲೆಯ ರೈತರಿಗೆ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸಹಾಯ ಸೌಲಭ್ಯ: ಕೃಷಿ ಇಲಾಖೆಯಿಂದ ಕೊಡಗಿನ ರೈತರಿಗೆ ಬೇಕಾಗುವ ಎಲ್ಲಾ ಯಾಂತ್ರೀಕೃತ ಸಲಕರಣೆಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಾಯಧನದೊಂದಿಗೆ ರಿಯಾಯಿತಿಯಲ್ಲಿ ಕಲ್ಪಿಸುತ್ತಿದ್ದು, ರೈತರು ಹೆಚ್ಚಿನ ಮಾಹಿತಿಯೊಂದಿಗೆ ಸೌಲಭ್ಯಕ್ಕಾಗಿ ಆಯ ತಾಲೂಕಿನ ಕೃಷಿ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸಂಪರ್ಕಿಸುವಂತೆಯೂ ಸಲಹೆ ನೀಡಿದ್ದಾರೆ.