ಮಡಿಕೇರಿ, ಡಿ. 24: ಕೌಟುಂಬಿಕ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ನೆಮ್ಮದಿಯ ಜೀವನದೊಂದಿಗೆ ಸಮಾಜದಲ್ಲಿ ಸಾಮರಸ್ಯ ಹಾಗೂ ಸದ್ಭಾವನೆ ಮೂಡುತ್ತದೆ ಎಂದು ಕುಟುಂಬ ಪ್ರಬೋಧನ್‍ನ ಅಖಿಲ ಭಾರತೀಯ ಪ್ರಮುಖ್ ಸು. ರಾಮಣ್ಣ ಅಭಿಪ್ರಾಯಪಟ್ಟರು.

ಸಾಮರಸ್ಯ ವೇದಿಕೆ ಮಡಿಕೇರಿ ಘಟಕದ ವತಿಯಿಂದ ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆದ ಸದ್ಭಾವನಗೋಷ್ಠಿಯಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.

ಕೌಟುಂಬಿಕ ಮೌಲ್ಯಗಳು ಎಲ್ಲರಿಗೂ ಸಮಾನವಾಗಿದೆ. ಕುಟುಂಬದಲ್ಲಿ ಪರಸ್ಪರ ಹೊಂದಾಣಿಕೆ, ಸಮರ್ಪಣೆ, ಹಿರಿಯರಿಗೆ ಗೌರವ, ದುಡಿಮೆಗೆ ದೇವರ ಪೂಜೆಯ ಮಹತ್ವ, ಅತಿಥಿ ದೇವೋಭವ ಭಾರತೀಯ ಜೀವನ ಮೌಲ್ಯಗಳಾಗಿವೆ. ನೆರೆಹೊರೆಯವರ ಕಷ್ಟ ಸುಖದಲ್ಲಿ ಕಾಳಜಿ ವಹಿಸುವದು, ಇಡೀ ದೇಶ, ಸೃಷ್ಟಿಯ ಬಗ್ಗೆ ಕಾಳಜಿ ವಹಿಸುವದು ನಮ್ಮ ಕರ್ತವ್ಯವಾಗಬೇಕು. ಇಡೀ ವಿಶ್ವವೇ ಒಂದು ಕುಟುಂಬ ವಿದ್ದಂತೆ, ಅದರಂತೆ ಬಾಳಿದವರು ಭಾರತೀಯರು. ಆದರೆ ಇವತ್ತು ಜಾತಿಯನ್ನು ಕೆರಳಿಸಿ ಸಮಾಜದಲ್ಲಿ ಜಾತಿ ವೈಷಮ್ಯದ ವಿಷ ಬೀಜವನ್ನು ಒತ್ತುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಸಮಾಜದಲ್ಲಿ ಜಾತಿಯನ್ನು ಅಳಿಸಲು ಅಸಾಧ್ಯ. ಆದರೆ ಜಾತಿ-ಜನಾಂಗದ ಮಧ್ಯೆ, ವೃತ್ತಿ ಬಾಂಧವರ ಮಧ್ಯೆ ಸಾಮರಸ್ಯ ಹಾಗೂ ಸದ್ಭಾವನೆ ಅಗತ್ಯವಾಗಿದೆ. ಪ್ರತೀ ಮನೆಯೂ ದೇವಾಲಯ, ಭಕ್ತಿ ಕೇಂದ್ರ, ವಿದ್ಯಾಕೇಂದ್ರಗಳಾದಾಗ ಸಮಾಜದಲ್ಲಿ ಸಾಮರಸ್ಯ, ಸದ್ಭಾವನೆ ಮೂಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ ಡಾ. ನಾಗರಾಜ್ ಮಾತನಾಡಿ ಪ್ರತೀ ಕುಟುಂಬವೂ ಪರಸ್ಪರ ಅನ್ಯೋನ್ಯತೆ ಯಿಂದ ಸೇರಿದಾಗ ದೇಶ ಹಾಗೂ ವಿಶ್ವದಲ್ಲಿ ಶಾಂತಿ,

(ಮೊದಲ ಪುಟದಿಂದ) ನೆಮ್ಮದಿಯ ಬದುಕಿನೊಂದಿಗೆ ಜೀವನ ಸುಂದರವಾಗುತ್ತದೆ. ಭಾರತೀಯ ಕೌಟುಂಬಿಕ ಮೌಲ್ಯದಿಂದಾಗಿ ಭಾರತ ಆಧ್ಯಾತ್ಮ ಗುರುವಾಗಿದೆ ಎಂದರು.

ಬಳಿಕ ನಡೆದ ಸಂವಾದದಲ್ಲಿ ಹರೀಶ್ ಸರಳಾಯ, ಅರುಣ್, ಗೀತಾ ಮಧುಕರ್ ಇನ್ನಿತರರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಜೀವನ ಮೌಲ್ಯಗಳ ಮಾಹಿತಿ ನೀಡಿದರು.

ಬಾಲಕೃಷ್ಣ ವೈಯಕ್ತಿಕ ಗೀತೆ ಹಾಡಿದರೆ, ಆರ್.ಎಸ್.ಎಸ್.ನ ಹಿರಿಯ ಸ್ವಯಂಸೇವಕ ಡಿ.ಹೆಚ್. ತಮ್ಮಪ್ಪ ಸ್ವಾಗತಿಸಿ, ಜಿಲ್ಲಾ ಕಾರ್ಯ ಕಾರಿಣಿ ಸದಸ್ಯ ಶಿವಾಜಿ ವಂದಿಸಿದರೆ, ಚಂದ್ರ ಉಡೋತ್ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಸೇರಿದ್ದವರಿಗೆ ಸಹ ಭೋಜನದ ವ್ಯವಸ್ಥೆ ಮಾಡಲಾಗಿತ್ತು.