ಕುಶಾಲನಗರ, ಡಿ. 27: ಕುಶಾಲನಗರವನ್ನು ಕೇಂದ್ರವಾಗಿಸಿ ನೂತನ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಸರಣಿ ಧರಣಿ ಕಾರ್ಯಕ್ರಮದಲ್ಲಿ ಬುಧವಾರ ತೊರೆನೂರು, ಶಿರಂಗಾಲ ಸ್ಥಾನೀಯ ಸಮಿತಿ ಪದಾಧಿಕಾರಿಗಳು ಧರಣಿ ನಡೆಸಿದರು.
ಕಾರು ನಿಲ್ದಾಣದ ಗುಂಡುರಾವ್ ಸತ್ಯಾಗ್ರಹ ವೇದಿಕೆಯಲ್ಲಿ ಧರಣಿ ನಡೆಸಿದ ಪದಾಧಿಕಾರಿಗಳು ಕಾವೇರಿ ತಾಲೂಕಿಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ರಚಿಸಿದರು. ಧರಣಿಯಲ್ಲಿ ಗೊಂದಿಬಸವನಹಳ್ಳಿ ಗ್ರಾಮಸ್ಥರು ಕೂಡ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭ ತೊರೆನೂರು ಸ್ಥಾನೀಯ ಸಮಿತಿ ಅಧ್ಯಕ್ಷರಾದ ಕೆ.ಎಸ್.ಕೃಷ್ಣೇಗೌಡ, ಶಿರಂಗಾಲ ಸಮಿತಿ ಅಧ್ಯಕ್ಷ ಎಸ್.ಎಸ್.ಶ್ರೀನಿವಾಸ, ಶಿರಂಗಾಲ ಗ್ರಾಪಂ ಅಧ್ಯಕ್ಷ ರಮೇಶ್, ತೊರೆನೂರು ಗ್ರಾಪಂ ಅಧ್ಯಕ್ಷ ದೇವರಾಜ್, ಸ್ಥಾನೀಯ ಸಮಿತಿಗಳ ಪ್ರಮುಖರಾದ ಚಂದ್ರಶೇಖರ್, ಟಿ.ಕೆ.ಪಾಂಡುರಂಗ, ಹೆಚ್.ಬಿ.ಚಂದ್ರಪ್ಪ, ನಿಂಗಾಜಮ್ಮ, ಗೋವಿಂದಪ್ಪ ಮತ್ತಿತರರು ಇದ್ದರು.