ಸೋಮವಾರಪೇಟೆ, ಡಿ. 26: ಕೇಂದ್ರ ಸರ್ಕಾರದ ಜನೌಷಧ್ ಯೋಜನೆಯಡಿ ನೂತನವಾಗಿ ಔಷಧಿ ಮಳಿಗೆ ತೆರೆಯುವ ಸಂಬಂಧ ಇಲ್ಲಿನ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶಾಸಕ ಅಪ್ಪಚ್ಚು ರಂಜನ್ ಸ್ಥಳ ಪರಿಶೀಲನೆ ನಡೆಸಿದರು.

ಸಾರ್ವಜನಿಕರಿಗೆ ಕಡಿಮೆ ಖರ್ಚಿನಲ್ಲಿ ಔಷಧಿಗಳು ದೊರೆಯಬೇಕೆಂಬ ಸದುದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಯೋಜನೆ ಜಾರಿಗೆ ತಂದಿದ್ದು, ಆಸ್ಪತ್ರೆಯ ಒಳಭಾಗದಲ್ಲಿಯೇ ಔಷಧಿ ಮಳಿಗೆ ತೆರೆಯಲಾಗುವದು. ಇದರೊಂದಿಗೆ ಸುಸಜ್ಜಿತ ಕ್ಯಾಂಟೀನ್ ವ್ಯವಸ್ಥೆಯನ್ನೂ ಮಾಡಲಾಗುವದು ಎಂದು ಶಾಸಕ ರಂಜನ್ ತಿಳಿಸಿದರು.

ಸಂಬಂಧಿಸಿದ ಅಭಿಯಂತರರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕರು, ಆಸ್ಪತ್ರೆಯ ಮೊದಲನೇ ಗೇಟ್ ಬಳಿ ಸಾಕಷ್ಟು ಸ್ಥಳಾವಕಾಶವಿದ್ದು, ತಕ್ಷಣ ಕ್ರಿಯಾಯೋಜನೆ ತಯಾರಿಸುವಂತೆ ಸೂಚಿಸಿದರು. ಈ ಸಂದರ್ಭ ಆಸ್ಪತ್ರೆಯ ಅಧಿಕಾರಿ ಶಿವಪ್ಪ, ವೈದ್ಯ ಶಿವಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.