ಭಾಗಮಂಡಲ, ಡಿ. 26: ಇಲ್ಲಿಗೆ ಸಮೀಪದ ಕೋರಂಗಾಲ ಸರ್ಕಾರಿ ಶಾಲೆಯ ಬಳಿ ರೂ. 16.43 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು ಶಾಸಕ ಕೆ.ಜಿ. ಬೋಪಯ್ಯ ಹಾಗೂ ಜಿಲ್ಲಾಪಂಚಾಯಿತಿ ಸದಸ್ಯೆ ಕವಿತಾ ಪ್ರಭಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಸ್ಥಳದಲ್ಲಿ ವಾಜಪೇಯಿ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಬಳಿಕ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ, ಮುಂದಿನ ಎರಡು ವರ್ಷದೊಳಗೆ ಕೋರಂಗಾಲ ಗ್ರಾಮದಲ್ಲಿ ಶಾಲೆ ಆರಂಭವಾಗಲಿದೆ. ಇದೀಗ ಕುರುಂಜಿ ವೆಂಕಟರಮಣ ಗೌಡ ಕಟ್ಟಡದಲ್ಲಿ ಆರಂಭವಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ತರಗತಿಗಳನ್ನು ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ಇದಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸಲಾಗುವದು ಎಂದರು. ವಸತಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಉತ್ತಮ ಫಲಿತಾಂಶವನ್ನು ತರುವಂತೆ ಶಿಕ್ಷಕರಿಗೆ ಸೂಚಿಸಿದರು. ಕಟ್ಟಡದ ಕಾಮಗಾರಿಯನ್ನು ಉತ್ತಮ ರೀತಿಯಲ್ಲಿ ನಿರ್ಮಿಸಬೇಕು. ಬಿಸಿನೀರಿನ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಲಭಿಸಲು ಸೋಲಾರ್ ಹಾಗೂ ಗುಜರಾತ್ ಮಾದರಿ ಬಾಯ್ಲರ್ ಬಳಸಬೇಕು. ಯಾವದೇ ರೀತಿಯ ಕೊರತೆ ಎದುರಾಗದಂತೆ ಸಂಬಂಧಿಸಿದ ಇಂಜಿನಿಯರ್‍ಗೆ ಹೇಳಿದರು. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ ಮಾತನಾಡಿ, ವಾಜಪೇಯಿ ವಸತಿಶಾಲೆ ಕೋರಂಗಾ ಲಕ್ಕೆ ದೊರೆತ್ತಿರುವದು ಸೌಭಾಗ್ಯ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾ ಪ್ರಭಾಕರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಭವಾನಿ ಹರೀಶ್, ಜಿಲ್ಲಾ ಯುವ ಮೋರ್ಚಾ ಖಜಾಂಚಿ ಕಡ್ಲೇರ ಕೀರ್ತನ್, ಗ್ರಾಮ ಪಂಚಾಯಿತಿ ಸದಸ್ಯರಾದ ರಾಜುರೈ, ಪುರುಷೋತ್ತಮ, ಹರಿಣಿ, ಶಿಕ್ಷಕ ಎ.ಎಸ್. ಶ್ರೀಧರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವಾಜಪೇಯಿ ವಸತಿ ಶಾಲೆಗೆ ಅರ್ಜಿ ಸಲ್ಲಿಸಲು ಜನವರಿ 23 ಕೊನೆಯ ದಿನವಾಗಿದ್ದು, ವಿದ್ಯಾರ್ಥಿಗಳು ಸದುಪಯೋಗವನ್ನು ಪಡೆದುಕೊಳ್ಳಲು ಕೋರಲಾಯಿತು.