ವೀರಾಜಪೇಟೆ: ಡಿ:26 ವೀರಾಜಪೇಟೆ ತಾಲೂಕು ಕಚೇರಿಯ ಅಕ್ರಮ ಸಕ್ರಮ ಉಸ್ತುವಾರಿ ಸಿಬ್ಬಂದಿ ಸಿ.ಪಿ.ಗಣೇಶ್‍ಗೆ ಇಲ್ಲಿನ ಪ್ರಿನ್ಸಿಪಲ್ ಮುನ್ಸಿಫ್ ನ್ಯಾಯಾಲಯದ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ್ ಅಂಚಿ ಅವರು ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿ ಆದೇಶಿಸಿದ್ದಾರೆ.
ಸಿಬ್ಬಂದಿ ಸಿ.ಪಿ.ಗಣೇಶ್ ಅಕ್ರಮ ಸಕ್ರಮ ಕಡತಗಳ ನಾಪತ್ತೆ, ಕಡತಗಳ ಕಳವು ಹಾಗೂ ಕೆಲವು ಕಡತಗಳನ್ನು ತಿದ್ದಿದ ಆರೋಪದಡಿಯಲ್ಲಿ ತಾಲೂಕು ತಹಶೀಲ್ದಾರ್ ನೀಡಿದ ದೂರಿನ ಮೇರೆ ನಗರ ಪೊಲೀಸರು ಐ.ಪಿ.ಸಿ. 381, 409 ವಿಧಿ ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.
ಪ್ರಕರಣ ದಾಖಲಿಸಿದ ದಿನದಿಂದಲೇ ಗಣೇಶ್ ತಲೆಮರೆಸಿಕೊಂಡಿದ್ದು ಇಂದು ಇಲ್ಲಿನ ಪ್ರಿನ್ಸಿಪಲ್ ಮುನ್ಸಿಫ್ ನ್ಯಾಯಾಲಯದ ಮುಂದೆ ಪೂರ್ವಾಹ್ನ 11ಗಂಟೆಗೆ ಗಣೇಶ್ ಶರಣಾಗತರಾದಾಗ ನ್ಯಾಯಾಧೀಶರು ಆದೇಶವನ್ನು ಅಪರಾಹ್ನಕ್ಕೆ ಮುಂದೂಡಿದರು. ನಂತರ ಅಪರಾಹ್ನ 3ಗಂಟೆಗೆ ನಿರೀಕ್ಷಣಾ ಜಾಮೀನು ನೀಡಿ ಹದಿನೈದು ದಿನಗಳಿಗೊಮ್ಮೆ ಭಾನುವಾರ ನಗರ ಪೊಲೀಸ್ ಠಾಣೆಯಲ್ಲಿ ಹಾಜರಾತಿ ಸಹಿ ಹಾಕುವದು. ಪೊಲೀಸರ ತನಿಖೆಗೆ ಸಹಕರಿಸುವದು. ಸಾಕ್ಷ್ಯಗಳನ್ನು ನಾಶಪಡಿಸದಂತೆ ಎಚ್ಚರ ವಹಿಸುವದು. ಜೊತೆಗೆ ರೂ 20,000 ಬಾಂಡ್ ಮುಚ್ಚಳಿಕೆ ಬರೆದುಕೊಡುವಂತೆ ಷರತ್ತು ವಿಧಿಸಿದ್ದಾರೆ.
ಈ ಕ್ರಿಮಿನಲ್ ಪ್ರಕರಣದಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರ್ ಆರಾಧ್ಯ ನೇತೃತ್ವದಲ್ಲಿ ಪೊಲೀಸರು ತಾ:18ರಂದು ಕಾನೂರು ಗ್ರಾಮದ ಗಣೇಶನ ಮನೆಗೆ ಧಾಳಿ ನಡೆಸಿದಾಗ ಪೊಲೀಸರಿಗೆ ಅಕ್ರಮ ಸಕ್ರಮ ಸಮಿತಿಗೆ ಸಂಬಂಧಿಸಿದ ನೋಂದಣಿಯ ಐದು ಪುಸ್ತಕಗಳು, ಎರಡು ಕಡತಗಳನ್ನು ವಶ ಪಡಿಸಿಕೊಂಡಿದ್ದರು.
2013ರಲ್ಲಿ ಅಕ್ರಮ ಸಕ್ರಮ ಸಮಿತಿಯಲ್ಲಿ ಉಸ್ತುವಾರಿಯಾಗಿದ್ದ ಸಿ.ಪಿ.ಗಣೇಶ್ ಎರಡು ವರ್ಷಗಳ ಹಿಂದೆ ಇಲ್ಲಿನ ಪಟ್ಟಣ ಪಂಚಾಯಿತಿಗೆ ನಿಯೋಜನೆಗೊಂಡು ಕಾರ್ಯ ನಿರ್ವಹಿಸುತ್ತಿದ್ದರು. ಆರೋಪಿ ಸಿ.ಪಿ. ಗಣೇಶ್ ಪರ ವಕೀಲ ಡಿ.ಸಿ.ದ್ರುವಕುಮಾರ್ ವಾದಿಸಿದ್ದರು.