ಗೋಣಿಕೊಪ್ಪಲು, ಡಿ. 27 : ಹಸಿರು ಗಿಡಮರಗಳ ನಡುವಿನ ಹೊನಲು ಬೆಳಕಿನ ವರ್ಣರಂಜಿತ ವೇದಿಕೆಯಲ್ಲಿ ಗಿರಿಜನ ಯುವಕ ಯುವತಿಯರು ಕುಣಿದು ಕುಪ್ಪಳಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪಾಲಿಬೆಟ್ಟ ಸಮೀಪದ ಚೊಟ್ಟೆಪಾರಿ ಗಿರಿಜನ ಹಾಡಿಯಲ್ಲಿ ಆಯೋಜಿಸಿದ್ದ ಗಿರಿಜನೋತ್ಸವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಮೂಲೆ ಮೂಲೆಗಳಿಂದ ಬಂದಿದ್ದ ಕಲಾವಿದರು ತಮ್ಮ ಸಂಸ್ಕತಿಯ ಕಲಾ ಪ್ರಕಾರಗಳನ್ನು ನೈಜವಾಗಿ ಪ್ರದರ್ಶಿಸಿದರು. ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ನಡೆದ ಕಾರ್ಯಕ್ರಮದಲ್ಲಿ ಗಿರಿಜನರು ಪಕ್ಷಗಳಂತೆ ಸ್ವಚ್ಛಂದವಾಗಿ ಹಾರಾಡಿದರು. ನವಿಲಿನಂತೆ ನರ್ತಿಸಿದರು. ಜಿಂಕೆಯತೆ ಕುಣಿದಾಡಿದರು. ಕೋಗಿಲೆಯಂತೆ ತಮ್ಮ ಕಷ್ಟಸುಖಗಳನ್ನು ಬಿಂಬಿಸುವ ಹಾಡುಗಳನ್ನು ಹಾಡಿದರು.

ಅಡುಗೆ ಮನೆಯ ನಿತ್ಯ ಬಳಕೆಯ ವಸ್ತುಗಳೇ ಇವರ ವಾದ್ಯ ಪರಿಕರಗಳಾಗಿದ್ದವು. ಮರದ ಸೊಪ್ಪು, ಮಸಿ, ಹೂಗಳೇ ಸೌಂದರ್ಯವರ್ಧಕ ವಸ್ತುಗಳಾಗಿದ್ದವು.

ಹಾಡಿಯ ಗಿರಿಜನ ನಾಯಕ ಜೆ.ಕೆ.ರಾಮು ಅವರ ಕೊಳಲು ವಾದನ, ಜೇನುಕೊಯ್ಯುವಾಗ ಜೇನು ಕುರುಬರು ಹಾಡುವ ತುಪ್ಪ ಕಾಲ ಹಾಡು ಸುಶ್ರಾವ್ಯವಾಗಿತ್ತು. ಹಾಡಿನೊಂದಿಗಿನ ಬಾರೆ ಗೀಜುಗನ ಹಾಡು ಮತ್ತು ನೃತ್ಯ ಸಂಯೋಜನೆ ಆಕರ್ಷಕವಾಗಿತ್ತು.

ತಟ್ಟೆಕೆರೆ ಹಾಡಿಯ ಯರವರ ಕುಣಿತ, ಮಾಯಮುಡಿ ಮಣಿಕುಂಜಿ ಅವರ ಚೀನಿದುಡಿ, ರಮೇಶ್ ತಂಡದವರ ಹಾಡಿ ಸಂಗೀತ, ಚೆನ್ನಂಗಿ ಹಾಡಿಯ ಕೋಲಾಟ ಮನಮೋಹಕವಾಗಿದ್ದವು. ಬೆಳಗ್ಗಿನಿಂದ ಸಂಜೆವೆರೆಗೆ ಕೆಲಸದಲ್ಲಿ ಮುಳುಗುವ ಗಿರಿಜನರು ಯಾವದೇ ಶಾಮಿಯಾನ, ರಂಗಮಂಟಪವಿಲ್ಲದ ನಿಸರ್ಗದ ಮಡಿಲಿನಲ್ಲಿ ನಡೆದ ಈ ಕಾರ್ಯಕ್ರಮವನ್ನು ನೋಡಿ ಆನಂದಿಸಿದರು.

ಸನ್ಯಾಸಿಪುರ ಸ್ವಾಮಿನಾಯಕ ತಂಡದ ಡೊಳ್ಳುಕುಣಿತ, ಮೈಸೂರಿನ ಕೃಷ್ಣನಾಯಕ ತಂಡದ ಕಂಸಾಳೆ, ರಮೇಶ್ ತಂಡದವರ ಕೋಲಾಟ, ರೇಷ್ಮೆಹಾಡಿ ಸಿದ್ದಪ್ಪ ತಂಡದ ಜೇನುಕೊಯ್ಯುವ ನೃತ್ಯ, ಆನೆ ಓಡಿಸುವ ಹಾಡು ರಂಜಿಸಿದವು. ಅಂತಿಮವಾಗಿ ಕೊಡಗಿನ ವಾಲಗಕ್ಕೆ ಸಭಿಕರೆಲ್ಲ ಕುಣಿದುಕುಪ್ಪಳಿಸಿ ಸಂಭ್ರಮಿಸಿದರು.

ಚೆನ್ನಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಉದಯ ಕಾರ್ಯಕ್ರಮ ಉದ್ಘಾಟಿಸಿದರು. ತಿತಿಮತಿ ಲ್ಯಾಂಪ್ ಸೊಸೈಟಿ ಅಧ್ಯಕ್ಷ ಜೆ.ಕೆ.ರಾಮು, ಹಾಡಿ ಅಧ್ಯಕ್ಷ ಸಿದ್ದಪ್ಪ, ತಟ್ಟೆಕೆರೆ ಹಾಡಿ ಮುಖಂಡ ರಮೇಶ, ರೇಷ್ಮೆಹಡ್ಲು ಹಾಡಿಯ ರಾಜು, ಸಾಹಿತಿ ಡಾ.ಜೆ. ಸೋಮಣ್ಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಮಂಜುನಾಥ್ ಹಾಜರಿದ್ದರು.

ಚಿತ್ರ ವರದಿ : ಎನ್.ಎನ್.ದಿನೇಶ್