ಸುಂಟಿಕೊಪ್ಪ, ಡಿ. 27: ಸುಂಟಿಕೊಪ್ಪದ ಶ್ರೀ ಪುರಂ ಅಯ್ಯಪ್ಪ ದೇವಾಲಯದ 47ನೇ ವಾರ್ಷಿಕ ಮಂಡಲ ಪೂಜಾ ಮಹೋತ್ಸವವು ಅಯ್ಯಪ್ಪ ವೃತಧಾರಿಗಳು, ಭಕ್ತರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಶ್ರೀಪುರಂಪುರಂ ಅಯ್ಯಪ್ಪ ದೇವಾಲಯದ 47ನೇ ವಾರ್ಷಿಕ ಮಂಡಲ ಪೂಜಾ ಅಂಗವಾಗಿ ದೇವಸ್ಥಾನವನ್ನು ಬಣ್ಣ ಬಣ್ಣದ ಹೂ ಸೇರಿದಂತೆ ತೆಂಗಿನ ಮರದ ಗರಿಯಿಂದ ನಿರ್ಮಿಸಲಾದ ಕುಡುತ್ತವನ್ನು ನಗರದ ಇತರೆಡೆ ಅಲಂಕಾರಗೊಳಿಸಲಾಗಿತ್ತು. ಮಂಗಳವಾರ ಬೆಳಗ್ಗಿನಿಂದಲೇ ದೇವಸ್ಥಾನದ ಮುಖ್ಯ ಅರ್ಚಕ ಗಣೇಶ್ ಉಪಾದ್ಯಾಯ ಅವರ ನೇತೃತ್ವದಲ್ಲಿ ಪ್ರಸನ್ನ ಭಟ್, ರಾಧಾಕೃಷ್ಣ ಭಟ್, ಶ್ರೀನಿವಾಸ್ ಭಟ್, ಮಹಬಲಭಟ್ ದರ್ಶನ್ ಭಟ್, ಅವರುಗಳು 12 ತೆಂಗಿನಕಾಯಿಗಳ ಗಣಪತಿ ಹೋಮ, ಗಣಪತಿ ಹೋಮ, ಅಯ್ಯಪ್ಪ ಸ್ವಾಮೀಗೆ ಪಂಚಾಮೃತಾಭಿಷೇಕ, ದೇವರಿಗೆ ಮಧ್ಯಾಹ್ನದ ಪೂಜೆ, ಲಕ್ಷಾರ್ಚನೆ, ಪಲ್ಲಪೂಜೆ ನಡೆಸಿದರು.
ಇದರ ಅಂಗವಾಗಿ ಕೇರಳದ ಚೆಂಡೆವಾದ್ಯ ಮತ್ತು ಗಂಭೀರ ಸಿಡಿಮದ್ದುಗಳನ್ನು ಸಿಡಿಸಲಾಯಿತು. ಮಧ್ಯಾಹ್ನ 1 ಗಂಟೆ ವೇಳೆಗೆ ಅಯ್ಯಪ್ಪ ವೃತ್ತಧಾರಿಗಳು ಸೇರಿದಂತೆ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಮಹಾ ಪೂಜೆ, ಮಹಾಮಂಗಳಾರತಿ ನಡೆಸಲಾಯಿತು. ನಂತರ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನೀಡಲಾಯಿತು. ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಇಲ್ಲಿನ ಭೂಮಿಕಾ ಸ್ತ್ರೀ ಶಕ್ತಿ ವತಿಯಿಂದ ಶ್ರೀ ಅಯ್ಯಪ್ಪ ಸ್ವಾಮಿ ಮಂಡಲ ಪೂಜೆಯ ಅಂಗವಾಗಿ ವ್ಯಾಪಾರ ಮೇಳವನ್ನು ಪಟ್ಟಣದಲ್ಲಿ ತೆಂಗಿನಕಾಯಿ, ಕುಂಕುಮ ಹಾಗೂ ಇತರ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡಲಾಯಿತು.
ಈ ಕಾರ್ಯಕ್ರಮಕ್ಕೆ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ತಾ.ಪಂ. ಸದಸ್ಯೆ ವಿಮಲಾವತಿ, ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಉಪಾಧ್ಯಕ್ಷೆ ಪಿ.ಆರ್. ಸುಕುಮಾರ್, ಗ್ರಾ.ಪಂ. ಸದಸ್ಯರುಗಳಾದ ನಾಗರತ್ನ ಸುರೇಶ್, ಸಿ. ಚಂದ್ರ ಚಾಲನೆ ನೀಡಿದರು.