ಮಡಿಕೇರಿ, ಡಿ. 27: ಪ್ರತಿಯೋರ್ವ ಪ್ರಜೆಯೂ ಅಕ್ಷರ ಜ್ಞಾನ ಹೊಂದಿರಬೇಕು.., ಎಲ್ಲರೂ ಶಿಕ್ಷಿತರಾಗಬೇಕೆಂಬ ಉದ್ದೇಶ ದೊಂದಿಗೆ ಶಾಲೆಗಳನ್ನು ತೆರೆಯಲಾಗಿದೆ. ಅದರಲ್ಲೂ ಸರಕಾರ ಹಳ್ಳಿ ಹಳ್ಳಿಗಳಲ್ಲಿಯೂ ಕನ್ನಡ ಶಾಲೆಗಳನ್ನು ತೆರೆದು ಬಡವರ್ಗದ ಮಕ್ಕಳಿಗೆ ಅಕ್ಷರ ಜ್ಞಾನ ಉಣ ಬಡಿಸುತ್ತಿದೆ. ಆದರೆ ಬರಬರುತ್ತಾ ಶಿಕ್ಷಣ ಕ್ಷೇತ್ರ ಕೂಡ ಒಂದು ಉದ್ಯಮದಂತೆ ಮಾರ್ಪಾಡಾಗಿ ರುವದರಿಂದ ಆಂಗ್ಲ ವ್ಯಾಮೋಹ ದೊಂದಿಗೆ ಪೋಷಕರೂ ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳ ಮೊರೆ ಹೋಗುತ್ತಿರುವ ಕಾಲಘಟ್ಟದಲ್ಲಿ ಗ್ರಾಮೀಣ ಭಾಗಗಳಲ್ಲಿ ಕನ್ನಡ ಶಾಲೆಗಳ ಬಾಗಿಲು ಮುಚ್ಚಿಕೊಳ್ಳುತ್ತಿವೆ.
ನಗರ ವ್ಯಾಪ್ತಿಯಲ್ಲಿ ಸರಕಾರಿ ಶಾಲೆಗಳಿದ್ದರೂ ವಿದ್ಯಾರ್ಥಿಗಳ ಕೊರತೆಯಿಂದ ನಲುಗುತ್ತಿವೆ. ಮಡಿಕೇರಿ ನಗರ ವ್ಯಾಪ್ತಿಯಲ್ಲಿರುವ ನಗರಸಭೆಯ ಅಧೀನದಲ್ಲಿರುವ ತೀರಾ ಬಡವರ್ಗದ ಮಕ್ಕಳೇ ವಿದ್ಯಾರ್ಜನೆ ಮಾಡುತ್ತಿರುವ ಮೂರು ಕನ್ನಡ ಶಾಲೆಗಳ ಪರಿಸ್ಥಿತಿಯೂ ಇದೇ ಆಗಿದೆ. ವಿದ್ಯಾರ್ಥಿಗಳಿದ್ದರೂ ಶಿಕ್ಷಕರಿಲ್ಲ. ಸೇವಾಮನೋಭಾವದಿಂದ ಪಾಠ ಮಾಡುತ್ತಿರುವ ಗೌರವ ಶಿಕ್ಷಕರಿಗೆ ಸಂಬಳವಿಲ್ಲದಂತಹ ಪರಿಸ್ಥಿತಿ ಇಲ್ಲಿದೆ...
ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಮೂರು ಕನ್ನಡ ಸರಕಾರಿ ಪ್ರಾಥಮಿಕ ಶಾಲೆಗಳಿವೆ. ಕನಕದಾಸ ರಸ್ತೆಯಲ್ಲಿರುವ ಹಿಂದೂಸ್ತಾನಿ ಶಾಲೆ, ಮಹದೇವಪೇಟೆಯಲ್ಲಿರುವ ಎ.ವಿ. ಶಾಲೆ, ಜಿ.ಟಿ. ರಸ್ತೆಯಲ್ಲಿರುವ ಶಾಲೆಗಳು. ಈ ಮೂರು ಶಾಲೆಗಳ ಪೈಕಿ ಎ.ವಿ. ಶಾಲೆ ಹಾಗೂ ಜಿ.ಟಿ. ವೃತ್ತದ ಶಾಲೆಗಳು ಈಗಾಗಲೇ ಶತಮಾನೋತ್ಸವ ಆಚರಿಸಿಕೊಂಡಿವೆ. ಇನ್ನೂ ಹಿಂದೂಸ್ತಾನಿ ಶಾಲೆ ಮುಂದಿನ ವರ್ಷದಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳಲಿದೆ. ಒಂದೊಮ್ಮೆ ಖಾಸಗಿ ಶಾಲೆಗಳು ಬರುವದಕ್ಕೆ ಮುಂಚೆ ನಗರ ವ್ಯಾಪ್ತಿಯ ಸಿರಿವಂತರ ಮಕ್ಕಳೂ ಕೂಡ ಇದೇ ಶಾಲೆಗಳಲ್ಲಿ ಕಲಿತು ಉನ್ನತ ಪದವಿ, ಹುದ್ದೇಗೆರಿದ್ದಾರೆ. ಸಾಧಕರಾಗಿದ್ದಾರೆ. ನಂತರದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ ಯಾದರೂ ಇದೀಗ ಮೂರು ಶಾಲೆಗಳಲ್ಲೂ ಸೇರಿ ಒಟ್ಟು 150ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಶಿಕ್ಷಕರು ಮಾತ್ರ ನಾಲ್ವರೇ.., ಇನ್ನುಳಿದ ಏಳು ಮಂದಿ ಗೌರವ ಶಿಕ್ಷಕರಾಗಿದ್ದಾರೆ.
ಸಂಬಳವಿಲ್ಲ: ಹಿಂದೂಸ್ತಾನಿ ಶಾಲೆ ಹಾಗೂ ಜಿ.ಟಿ. ರಸ್ತೆ ಶಾಲೆಗಳಲ್ಲಿ ತಲಾ ಓರ್ವ ಹಾಗೂ ಎ.ವಿ. ಶಾಲೆಯಲ್ಲಿ ಇಬ್ಬರು ಸೇರಿದಂತೆ ನಾಲ್ವರು ಸರಕಾರಿ ಸಂಬಳ ಪಡೆಯುತ್ತಿರುವ ಖಾಯಂ ಶಿಕ್ಷಕರಾಗಿದ್ದಾರೆ. ಇನ್ನುಳಿದಂತೆ ಎ.ವಿ. ಶಾಲೆ ಹಾಗೂ ಜಿ.ಟಿ. ರಸ್ತೆ ಶಾಲೆಗಳಲ್ಲಿ ತಲಾ ಇಬ್ಬರು ಹಾಗೂ ಹಿಂದೂಸ್ತಾನಿ ಶಾಲೆಯಲ್ಲಿ ಮೂವರು ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಚ್ಚರಿಯೆಂದರೆ ಈ ಗೌರವ ಶಿಕ್ಷಕರುಗಳು ಹತ್ತು ಹಲವಾರು ವರ್ಷಗಳಿಂದ ಸಂಬಳವಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ. ಇದುವರೆಗೆ ನಗರಸಭೆಯಿಂದ ಗೌರವ ವೇತನ ನೀಡಲಾಗುತ್ತಿತ್ತಾದರೂ ಇದೀಗ ಕೆಲವು ವರ್ಷಗಳಿಂದ ವೇತನ ಸ್ಥಗಿತಗೊಳಿಸಲಾಗಿದೆ. ಆದರೂ ಕೂಡ ಈ ಶಿಕ್ಷಕರು ಇಂದಲ್ಲ ನಾಳೆ ವೇತನ ಸಿಗಬಹುದೆಂಬ ಆಶಾಭಾವನೆ ಯೊಂದಿಗೆ ತಮ್ಮ ಸೇವೆ ಮುಂದುವರಿಸಿದ್ದಾರೆ.
ಸಭೆಯಲ್ಲಿ ಆಗ್ರಹ
ಸಂಬಳವಿಲ್ಲದೆ ದುಡಿಯುತ್ತಿರುವ ಗೌರವ ಶಿಕ್ಷಕರುಗಳಿಗೆ ವೇತನ ನೀಡುವ ಬಗ್ಗೆ ಹಲವಾರು ಬಾರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿದೆ. ಸದಸ್ಯರುಗಳು ಕೂಡ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ವೇತನ ನೀಡುವಂತೆ ಆಗ್ರಹಿಸಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಈ ಸಂಬಂಧ ಯಾವದೇ ಕ್ರಮ ಕೈಗೊಳ್ಳದಿರುವದು ವಿಪರ್ಯಾಸವೇ ಸರಿ. ನಗರಸಭೆಯಿಂದ ಸಾಧ್ಯವಾಗದಿದ್ದಲ್ಲಿ ಶಾಲೆಗಳನ್ನು ದತ್ತು ನೀಡಿದರಾದರೂ ಶಾಲೆಯೊಂದಿಗೆ ಬಡ ವಿದ್ಯಾರ್ಥಿ ಗಳಿಗೆ ಬಹಳಷ್ಟು ಅನುಕೂಲ ವಾಗಲಿದೆ ಎಂಬದು ನಾಗರಿಕರು ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯವಾಗಿದೆ.
-ಸಂತೋಷ್