ಮಡಿಕೇರಿ, ಡಿ. 27: ಕೊಡಗು ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳ. ಇಲ್ಲಿನ ಪ್ರಾಕೃತಿಕ ಸೊಬಗನ್ನು ಸವಿಯಲು ಪ್ರವಾಸಿಗರ ದಂಡು ಹಿಂಡುಹಿಂಡಾಗಿ ಬರುತ್ತದೆ. ಅದರಲ್ಲೂ ಜಿಲ್ಲಾ ಕೇಂದ್ರ ಮಡಿಕೇರಿ ನಗರದಲ್ಲಿ ವಾರದ ಕೊನೆಯ ದಿನಗಳಲ್ಲಿ ಪ್ರವಾಸಿಗರದ್ದೇ ದರ್ಬಾರು... ಅದರಲ್ಲೂ ಒಟ್ಟೊಟ್ಟಾಗಿ ರಜೆಗಳು ಬಂತೆಂದರೆ ಮುಗಿಯಿತು... ಮಂಜಿನ ನಗರಿಯಲ್ಲಿ ವಾಹನಗಳ ಕಿರಿಕಿರಿ ಹೇಳತೀರದು.ಹೊರ ಭಾಗಗಳಿಂದ ಆಗಮಿಸುವ ವಾಹನಗಳಿಂದಾಗಿ ನಗರ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರ ವ್ಯವಸ್ಥೆಯೆ ಸಂಪೂರ್ಣವಾಗಿ ಅಲ್ಲೋಲ ಕಲ್ಲೋಲವಾಗಿ ಬಿಡುತ್ತದೆ.
ಸಂಚಾರಿ ವ್ಯವಸ್ಥೆಯನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಡಬೇಕಾಗುತ್ತದೆ.
(ಮೊದಲa ಪುಟದಿಂದ) ಪ್ರಸ್ತುತ ಡಿಸೆಂಬರ್ ತಿಂಗಳಿನಲ್ಲಿ ಲೆಕ್ಕವಿಲ್ಲದಷ್ಟು ಪ್ರವಾಸಿಗರ ವಾಹನಗಳು ಮಡಿಕೇರಿ ನಗರಕ್ಕೆ ಬಂದು ಹೋಗುತ್ತಿವೆ. ಕಳೆದ ವಾರವಂತೂ ಒಂದೆರಡು ದಿನ ಮಡಿಕೇರಿ ನಗರ ಸಂಪೂರ್ಣ ಪ್ರವಾಸಿಗರಿಂದ ತುಂಬಿಹೋಗಿತ್ತು. ಸಾಗರದಂತೆ ಹರಿದು ಬಂದ ಪ್ರವಾಸಿಗರು; ಅವರ ವಾಹನಗಳಿಂದಾಗಿ ಸಂಚಾರಿ ವ್ಯವಸ್ಥೆಯೆ ಒಂದು ರೀತಿಯಲ್ಲಿ ಬುಡಮೇಲಾದಂತಿತ್ತು. ಮಡಿಕೇರಿ ನಗರದಲ್ಲಿ ಒಂದು ಸುತ್ತು ಬರಲು ಗಂಟೆಗಟ್ಟಲೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಂದು ಹಂತದಲ್ಲಿ ಪೊಲೀಸರು ಸಂಚಾರಿ ವ್ಯವಸ್ಥೆಯನ್ನು ನಿಯಂತ್ರಿಸಲಾಗದೆ ತಲೆ ಕೆರೆದುಕೊಳ್ಳುವಂತಾಗಿತ್ತು.
ಇಷ್ಟೆಲ್ಲಾ ಸಮಸ್ಯೆಗಳಾಗುತ್ತಿದ್ದರೂ ನಗರಸಭೆಗೆ ಮಾತ್ರ ಯಾವದೂ ಕಾಣಿಸುತ್ತಿಲ್ಲ! ಹೌದು. ಮಂಗೇರಿರ ಮುತ್ತಣ್ಣ ವೃತ್ತದ ಬಳಿ ವಾಹನಗಳ ಸಂದಣಿ ಹೆಚ್ಚಾಗಿ ಸಂಚಾರ ಸಮಸ್ಯೆ ಹೆಚ್ಚಾದಾಗ ರಾಜಾಸೀಟು ರಸ್ತೆ, ಗೌಳಿಬೀದಿ ರಸ್ತೆ, ಓಂಕಾರೇಶ್ವರ ದೇವಾಲಯ ರಸ್ತೆಗಳ ಮೂಲಕ ವಾಹನಗಳನ್ನು ಕಳುಹಿಸಿ ಪೊಲೀಸರು ವಾಹನದಟ್ಟಣೆಯನ್ನು ನಿಯಂತ್ರಿಸುತ್ತಿದ್ದರು. ಮಾತ್ರವಲ್ಲದೆ ಸ್ಥಳೀಯ ವಾಹನಗಳ ಚಾಲಕರು ಕೂಡ ಮುಖ್ಯ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾದಾಗ ಮೇಲಿನ ರಸ್ತೆಗಳ ಮೂಲಕ ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ತೆರಳುತ್ತಾರೆ.
ಆದರೆ... ಇದ್ದಕ್ಕಿದ್ದಂತೆ ಗೌಳಿಬೀದಿ ಹಾಗೂ ಪೆನ್ಷನ್ಲೇನ್ ರಸ್ತೆಗಳಲ್ಲಿ ಯುಜಿಡಿ ಕಾಮಗಾರಿ ಪ್ರಾರಂಭಗೊಂಡಿದೆ. ಕೆಲ ದಿನಗಳ ಹಿಂದೆ ಪೆನ್ಷನ್ ಲೇನ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಅದಾದ ಬಳಿಕ ಇದೀಗ ಗೌಳಿ ಬೀದಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಕಂಚಿ ಕಾಮಾಕ್ಷಿ ದೇವಾಲಯದ ಬಳಿ ರಸ್ತೆ ನಡುವೆ ಜೆಸಿಬಿ ಮೂಲಕ ಗುಂಡಿ ತೆಗೆದು ಕಾಮಗಾರಿ ನಿರ್ವಹಿಸಲಾಗುತ್ತಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಪೂರ್ವಪರ ಯೋಚಿಸದೆ ನಗರಸಭೆ ಯುಜಿಡಿ ಕಾಮಗಾರಿ ನಿರ್ವಹಿಸಲು ಅನುಮತಿ ನೀಡಿದೆಯೇ? ಅಥವಾ ನಗರಸಭೆಗೆ ಈ ಬಗ್ಗೆ ಮಾಹಿತಿ ಇಲ್ಲವೇ? ಗೊತ್ತಿಲ್ಲ. ಆದರೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವ ಪ್ರಸ್ತುತದ ದಿನಗಳಲ್ಲಿ ಈ ರೀತಿ ಯುಜಿಡಿ ಕಾಮಗಾರಿಯ ಹೆಸರಿನಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿಯುಂಟು ಮಾಡಿದರೆ ಸಂಚಾರಿ ವ್ಯವಸ್ಥೆ ಸರಿಪಡಿಸಲು ಹೇಗೆ ತಾನೆ ಸಾಧ್ಯ? ಸಣ್ಣ ರಸ್ತೆಗಳೇ ಇರುವ ಮಡಿಕೇರಿ ನಗರವ್ಯಾಪ್ತಿಯಲ್ಲಿ ಇರುವಂತಹ ರಸ್ತೆಗಳನ್ನು ಈ ರೀತಿ ಅಗೆದು ಬಗೆದರೆ ವಾಹನಗಳು ಸಂಚರಿಸುವದಾದರೂ ಎಲ್ಲಿ? ಈ ಬಗ್ಗೆ ಚಕಾರವೆತ್ತುತ್ತಿಲ್ಲ; ಜನರಿಗೆ ಸಮಸ್ಯೆ ತಪ್ಪುತ್ತಿಲ್ಲ.
ಡಿಸೆಂಬರ್ ಅಂತ್ಯದವರೆಗೆ ನಗರದಲ್ಲಿ ವಾಹನ ದಟ್ಟಣೆ ಇರುತ್ತದೆಂಬ ದೂರಾಲೋಚನೆ ಇಟ್ಟುಕೊಂಡು ಯುಜಿಡಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದರೆ ಈ ಸಮಸ್ಯೆ ಉದ್ಭವವಾಗುತ್ತಿತ್ತೇ? ಪ್ರಶ್ನಿಸುವದು ಯಾರನ್ನು? ಪ್ರಶ್ನಿಸಲಾಗದೆ ನೋವುಂಡು ಮನದಲ್ಲೇ ಹಿಡಿಶಾಪ ಹಾಕುತ್ತಿದ್ದಾರೆ ವಾಹನ ಸವಾರರು. -ಉಜ್ವಲ್ ರಂಜಿತ್.