ಒಡೆಯನಪುರ, ಡಿ. 26: ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಜಿಲ್ಲೆಗೆ ಮಾದರಿಯಾಗಿದೆ. ಈ ಶಾಲೆಯ ಸಹ ಶಿಕ್ಷಕ ಸಿ.ಎಸ್. ಸತೀಶ್ ಪ್ರತಿ ತಿಂಗಳು ತನ್ನ ಮಾಸಿಕ ಸಂಬಳದಲ್ಲಿ 2 ಸಾವಿರ ಕ್ಕಿಂತ ಹೆಚ್ಚಿನ ಹಣವನ್ನು ಶಾಲೆಯ ಅಭಿವೃದ್ಧಿಗಾಗಿ ವಿನಿಯೋಗಿಸುವ ಅಪರೂಪದ ಶಿಕ್ಷಕರಾಗಿದ್ದಾರೆ.

ಕಳೆದ 8 ವರ್ಷಗಳಿಂದ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸತೀಶ್ ಅವರು ಶಾಲೆಯನ್ನು ಅಭಿವೃದ್ಧಿ ಪಡಿಸಿರುವ ಬಗ್ಗೆ ಪತ್ರಿಕೆಗಳಲ್ಲಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಹಿನ್ನೆಲೆ ವರದಿಯನ್ನು ವೀಕ್ಷಿಸಿದ ಬೆಂಗಳೂರಿನ ನಿವೃತ್ತ ಇಂಜಿನಿಯರ್ ಗುರುಪ್ರಸಾದ್ ಅಯ್ಯಂಗಾರ್ ಅವರ ಪತ್ನಿ ಪೂರ್ಣಿಮಾ ಹಾಗೂ ಅಯ್ಯಂಗಾರ್ ದಂಪತಿ ಮುಳ್ಳೂರು ಶಾಲೆಗೆ ಭೇಟಿ ನೀಡಿದ್ದರು.

ಈ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸ್ವಚ್ಛತೆ ಮುಂತಾದ ಪ್ರಗತಿಯನ್ನು ವೀಕ್ಷಿಸಿದ ದಂಪತಿ ಶಾಲೆಗೆ ಬೇಕಾದ ದೇಣಿಗೆಗಳನ್ನು ನೀಡಿದರು. ಶಾಲಾ ವಿದ್ಯಾರ್ಥಿ ಗಳಿಗಾಗಿ ಕಂಪ್ಯೂಟರ್, 10 ಸಾವಿರ ಮೌಲ್ಯದ ಪುಸ್ತಕಗಳು, 5 ಸಾವಿರ ಮೌಲ್ಯದ ತಟ್ಟೆ ಮತ್ತು ಲೋಟಗಳು ವಿದ್ಯಾರ್ಥಿಗಳ ಶುಚಿತ್ವಕ್ಕೆ ಸಂಬಂಧಿಸಿದಂತೆ ನೈಲ್‍ಕಟ್ಟರ್, ಬಾಚಣಿಗೆ, ಸೋಪು, ಬ್ರಸ್, ಪೇಸ್ಟ್ ಲೇಖನ ಸಾಮಗ್ರಿಗಳಾದ ಪೆನ್ನು, ಪೆನ್ಸಿಲ್, ಮೆಂಡರ್, ಸ್ಕೆಚ್‍ಪೆನ್ ಸೇರಿದಂತೆ ಒಟ್ಟು 50 ಸಾವಿರ ರೂ. ಮೌಲ್ಯದ ಸಾಮಗ್ರಿ ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗುರುಪ್ರಸಾದ್ ಅಯ್ಯಂಗಾರ್-ಪ್ರತಿಯೊಬ್ಬರು ಸೇವಾ ಮನೋಭಾವನೆ ಯನ್ನು ಮೈಗೂಡಿಸಿಕೊಳ್ಳಬೇಕು, ಗ್ರಾಮೀಣ ಪ್ರದೇಶ, ಕುಗ್ರಾಮ ಪ್ರದೇಶಗಳ ಬಗ್ಗೆ ಕಾಳಜಿಯನ್ನು ಹೊಂದಬೇಕೆಂದರು. ಈ ನಿಟ್ಟಿನಲ್ಲಿ ನಾವು ಕೊಡಗು ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ ಕುಗ್ರಾಮಗಳಿಗೆ ಭೇಟಿನೀಡಿ ಶಾಲೆ, ವಸತಿ ಶಾಲೆಗಳಿ ವಿದ್ಯಾರ್ಥಿಗಳಿಗಾಗಿ ಸಮವಸ್ತ್ರ, ಕ್ರೀಡಾ ಸಾಮಗ್ರಿಗಳು ಹಾಗೂ ವೃದ್ಧಾಶ್ರಮ ಗಳಿಗೆ ಬೆಡ್‍ಶಿಟ್ ಮುಂತಾದ ಅಗತ್ಯ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿದ್ದೇವೆ.

ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸೇವಾ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾವಂತರಾಗಿ ಸಮಾಜದಲ್ಲಿ ಉತ್ತಮ ನಾಗರಿಕನಾಗ ಬೇಕು, ಮುಂದಿನ ದಿನಗಳಲ್ಲಿ ಸದರಿ ಮುಳ್ಳೂರು ಶಾಲೆಗೆ ಮತ್ತಷ್ಟು ಅಗತ್ಯ ಇರುವ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುವದು ಎಂದು ಭರವಸೆ ನೀಡಿದರು.

ಈ ಸಂದರ್ಭ ಪೂರ್ಣಿಮ ಅಯ್ಯಂಗಾರ್, ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ್, ಸಹ ಶಿಕ್ಷಕ ಸಿ.ಎಸ್. ಸತೀಶ್, ಎಸ್‍ಡಿಎಂಸಿ ಅಧ್ಯಕ್ಷ ಮಣಿ, ಪ್ರಮುಖರಾದ ಭಾಸ್ಕರ್, ಬಸವರಾಜ್ ಮುಂತಾದವರು ಇದ್ದರು.

- ವಿ.ಸಿ. ಸುರೇಶ್, ಒಡೆಯನಪುರ