ಮಡಿಕೇರಿ, ಡಿ. 27: ಹಂದಿ ಮಾಂಸ ಮಾರಾಟ ಮಳಿಗೆಯಲ್ಲಿ ಕಾಡು ಹಂದಿ ಮಾಂಸವನ್ನು ಮಾರಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆಹಚ್ಚಿರುವ ಅರಣ್ಯ ಇಲಾಖಾ ಸಿಬ್ಬಂದಿಗಳು ಇಬ್ಬರನ್ನು ಬಂಧಿಸಿದ್ದಾರೆ.ಮಡಿಕೇರಿಯ ಜಿ.ಟಿ. ವೃತ್ತದಲ್ಲಿರುವ ಮಾಂಸದಂಗಡಿ ಒಂದರಲ್ಲಿ ಈ ಪ್ರಕರಣ ನಡೆದಿದೆ. ಕಾಡು ಹಂದಿ ಮಾಂಸ ಮಾರಾಟದ ಸುಳಿವು ಪಡೆದ ಅರಣ್ಯ ಇಲಾಖಾ ಸಿಬ್ಬಂದಿಗಳು ಇಂದು ಬೆಳಿಗ್ಗೆ ಮಳಿಗೆಗೆ ಧಾಳಿ ನಡೆಸಿದ್ದು, ಅಂಗಡಿ ಮಾಲೀಕ ಯಲ್ಲಪ್ಪ ಹಾಗೂ ಜಿ. ರಮೇಶ್ ಎಂಬವರನ್ನು ಬಂಧಿಸಿದ್ದಾರೆ. ಮಳಿಗೆಯಲ್ಲಿ 29 ಕೆ.ಜಿ.ಯಷ್ಟು ಮಾಂಸ ಪತ್ತೆಯಾಗಿದೆ. ನಂಜನಗೂಡಿನಿಂದ ಮಾಂಸ ತಂದು ಇಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ಅರಣ್ಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡಿಎಫ್ಓ ಸೂರ್ಯಸೇನ್, ಆರ್.ಎಫ್.ಓ. ವಿಜಯಕುಮಾರ್, ಉಪವಲಯ ಅರಣ್ಯಾಧಿಕಾರಿ ಬಾಬು ರಾಥೋಡ್, ಸಿಬ್ಬಂದಿಗಳಾದ ಜಗನ್ನಾಥ್, ವಾಸು, ಪ್ರವೀಣ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.