ವೀರಾಜಪೇಟೆ, ಡಿ. 25: ವೀರಾಜಪೇಟೆ ಪಟ್ಟಣದ ಹಲವು ಸಮಸ್ಯೆಗಳನ್ನು ಮುಂದಿರಿಸಿ ಅವುಗಳನ್ನು ಬಗೆಹರಿಸಿಕೊಡುವಂತೆ ಹಾಗೂ ಈಗಾಗಲೇ ಸರಕಾರವು ಹೆಚ್ಚಿಸಿರುವ ಮನೆ ಕಂದಾಯ ಮುಂತಾದ ತೆರಿಗೆಗಳನ್ನು ಕೂಡಲೇ ಕಡಿಮೆ ಗೊಳಿಸಿ ಕೊಡುವಂತೆ ಕೋರಿ ಸ್ಥಳೀಯ ನಾಗರಿಕ ಸಮಿತಿಯ ಪದಾಧಿಕಾರಿಗಳು ಪಟ್ಟಣ ಪಂಚಾಯ್ತಿ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ಸಮಸ್ಯೆಗಳ ಮತ್ತು ಪರಿಹಾರದ ಕುರಿತು ನಾಗರಿಕ ಸಮಿತಿ ಪದಾಧಿಕಾರಿಗಳು ಅಧ್ಯಕ್ಷ ಇ.ಸಿ.ಜೀವನ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಸರಕಾರದಿಂದ ಬರುವ ಅನುದಾನಗಳ ಕೊರತೆಯಿಂದಾಗಿ ಅಭಿವೃದ್ಧಿ ಕಾರ್ಯಗಳು ಕೈಗೆತ್ತಿಕೊಳ್ಳಲಾಗುತ್ತಿಲ್ಲ. ಆದರೂ ಈ ಬಗ್ಗೆ ಒಂದಕ್ಕಿಂತ ಹೆಚ್ಚು ಸಲ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಮತ್ತು ಪೌರಾಡಳಿತ ಸಚಿವರೊಂದಿಗೆ ಚರ್ಚಿಸಲಾಗಿದೆ. ಕೂಡಲೇ ಅನುದಾನಗಳ ಬಿಡುಗಡೆಯಾಗುವ ನಿರೀಕ್ಷೆ ಇದೆಯೆಂದು ಪಂಚಾಯ್ತಿ ಅಧ್ಯಕ್ಷರು ಹೇಳಿದರು. ನಾಗರಿಕ ಸಮಿತಿಯ ಹಿರಿಯರಾದ ನಾಯಡ ವಾಸು ನಂಜಪ್ಪ, ಅಧ್ಯಕ್ಷರಾದ ಬಿ.ಬಿ.ನಾಣಯ್ಯ, ಸಂಚಾಲಕರಾದ ಡಾ||ಐ.ಆರ್.ದುರ್ಗಾಪ್ರಸಾದ್, ಎಲ್.ಜಿ.ಅಶೋಕ್, ಎನ್.ಕೆ.ಶರೀಫ್ ಹಾಗೂ ಇ.ಎಂ.ಅಬ್ದುಲ್ ಖಾದರ್ ಹಾಜರಿದ್ದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್‍ರವರೂ ಹಾಜರಿದ್ದರು.