ಕುಶಾಲನಗರ, ಡಿ. 25: ಪ್ರಕೃತಿಯ ಶಕ್ತಿಯನ್ನು ಬಳಸಿಕೊಳ್ಳಲು ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಮೈಸೂರಿನ ರಾಜಗಜೇಂದ್ರ ಗುರೂಜಿ ಹೇಳಿದ್ದಾರೆ. ಅವರು ಕುಶಾಲನಗರದ ಕನ್ನಿಕಾ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ನಡೆದ ಸ್ಥಳೀಯ ದೇವಾಲಯಗಳ ಒಕ್ಕೂಟ ಸಭೆಯಲ್ಲಿ ಮಾತನಾಡಿದರು.
ದೇವರ ಆರಾಧನೆ ಮೂಲಕ ಆಂತರಿಕ ಶಕ್ತಿ ವೃದ್ಧಿಗೊಳ್ಳಲು ಸಾಧ್ಯ. ಸಂತೋಷದ ಜೀವನ ಮೂಲಕ ಗುರಿ ಸಾಧಿಸಬಹುದು. ನಿರಂತರವಾಗಿ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ನೆಮ್ಮದಿಯ ಸಮಾಜ ಕಾಣಬಹುದು ಎಂದರು.
ಕುಶಾಲನಗರ ಗಣಪತಿ ದೇವಾಲಯದಲ್ಲಿ ಇತ್ತೀಚೆಗೆ ನಡೆದ ದಶಲಕ್ಷ ದೂರ್ವಾರ್ಚನೆ ಹೋಮ ಕಾರ್ಯಕ್ರಮ ಯಶಸ್ವಿಯಾದ ಹಿನ್ನೆಲೆಯಲ್ಲಿ ಗುರೂಜಿ ದೇವಾಲಯಗಳ ಆಡಳಿತ ಮಂಡಳಿಗಳು ಹಾಗೂ ಭಜನಾ ಮಂಡಳಿ ಮಹಿಳಾ ತಂಡದ ಸದಸ್ಯರಿಗೆ, ಭಕ್ತಾದಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ದೇವಾಲಯಗಳ ಒಕ್ಕೂಟ ಸಮಿತಿಯ ಅಧ್ಯಕ್ಷÀ ಎಂ.ಕೆ. ದಿನೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಶಾಲನಗರ ಗಣಪತಿ ದೇವಾಲಯ ಸಮಿತಿಯ ಅಧ್ಯಕ್ಷ ವಿ.ಎನ್. ವಸಂತಕುಮಾರ್, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಎನ್. ಚಂದ್ರಮೋಹನ್, ಉದ್ಯಮಿ ಜೆ.ಪಿ.ಅರಸ್, ಖಜಾಂಚಿ ಎಸ್.ಕೆ. ಶ್ರೀನಿವಾಸ ರಾವ್, ಸಲಹೆಗಾರ ಕೆ.ಕೆ. ದಿನೇಶ್, ವಿವಿಧ ದೇವಾಲಯಗಳ ಪದಾಧಿಕಾರಿಗಳು ಇದ್ದರು.