ಮೂರ್ನಾಡು, ಡಿ. 25 : ರಾಷ್ಟ್ರೀಯ ಉತ್ತಮ ಆಡಳಿತ ದಿನ ಹಾಗೂ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ ಪ್ರಯುಕ್ತ ಗ್ರಾಮೀಣ ಮಟ್ಟದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಮೇಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕೌಶಲ್ಯ ಅಭಿವೃದ್ಧಿ ಉದ್ಯಮಶೀಲ ಯುವ ಕಾರ್ಯಕ್ರಮ ಹಾಗೂ ಕ್ರೀಡಾ ಸಚಿವಾಲಯ, ಮಡಿಕೇರಿ ನೆಹರು ಯುವ ಕೇಂದ್ರ, ತಾಲೂಕು ಯುವ ಒಕ್ಕೂಟ, ಸುಭಾಶ್ ಯುವ ಸಮಿತಿ, ಭಾರತೀಯ ಮಜ್ದೂರು ಸಂಘ, ಮೇಕೇರಿ ಗಣೇಶ ಸೇವಾ ಸಮಿತಿ, ಅಟಲ್ ಬಿಹಾರಿ ಹೆಲ್ತ್‍ಲೈನ್, ಛತ್ರಪತಿ ಸ್ವಸಹಾಯ ಸಂಘ, ರೋಟರಿ ಸಮುದಾಯ ದಳ, ಮೇಕೇರಿ ಗ್ರಾಮ ಪಂಚಾಯಿತಿ ಹಾಗೂ ಶ್ರೀ ಸ್ವಾಗತ ಯುವಕ ಸಂಘದ ವತಿಯಿಂದ ಆಯೋಜಿಸಲಾದ ಶಿಬಿರವನ್ನು ಮಡಿಕೇರಿ ಡಿವೈಎಸ್‍ಪಿ ಸುಂದರ್ ರಾಜ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ರಕ್ತದಾನ ಶ್ರೇಷ್ಠ ದಾನವಾಗಿದೆ. ರಕ್ತದಾನ ಮಾಡುವದರಿಂದ ಜೀವ ಉಳಿಸುವ ಮಹತ್ಕಾರ್ಯದೊಂದಿಗೆ, ನಮ್ಮ ಆರೋಗ್ಯಕ್ಕೆ ಹಲವಾರು ಉಪಯುಕ್ತತೆ ಪಡೆದುಕೊಳ್ಳಬಹುದು. ಇಲ್ಲಿನ ಯುವಕರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಂಡಿದ್ದು, ಇನ್ನೂ ಹಲವಾರು ಸಮಾಜಕ್ಕೆ ಪೂರಕವಾದ ಸೇವೆಗಳನ್ನು ನಿರ್ವಹಿಸಬೇಕು ಎಂದು ಕರೆ ನೀಡಿದರು.
ಮಡಿಕೇರಿ ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯ ಡಾ. ಕರುಂಬಯ್ಯ ಮಾತನಾಡಿ ರಕ್ತದಾನ ಮಾಡುವ ದರಿಂದ ಶರೀರದಲ್ಲಿ ಯಾವದೇ ತೊಂದರೆಗಳು ಉಂಟಾಗುವದಿಲ್ಲ. ಇದರಿಂದ ಆರೋಗ್ಯಕ್ಕೆ ಹೆಚ್ಚಿನ ಉಪಯೋಗವಿದೆ. ಮನುಷ್ಯನಿಗೆ ರಕ್ತ ಅವಶ್ಯಕತೆ ಇದ್ದಲ್ಲಿ ರಕ್ತದಾನವೊಂದೇ ಮಾರ್ಗವಾಗಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಬೇರೇನೂ ಇಲ್ಲ ಇದರಿಂದ ರಕ್ತದಾನ ಹೆಚ್ಚಿನ ಮಹತ್ವ ಪಡೆದುಕೊಂಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ ವಹಿಸಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ತಾಲೂಕು ಪಂಚಾಯಿತಿ ಸದಸ್ಯೆ ಕುಮುದ ರಶ್ಮಿ, ಮೇಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಕೆ. ಜಯಂತಿ, ಉಪಾಧ್ಯಕ್ಷ ಭೀಮಯ್ಯ, ರೋಟರಿ ಮಿಸ್ಟಿಹಿಲ್ಸ್ ಫಂಡ್‍ಕಲೆಕ್ಷನ್ ಡೈರೆಕ್ಟರ್ ರತ್ನಾಕರ ರೈ, ಭಾರತೀಯ ಮಜ್ದೂರು ಸಂಘದ ಕಾರ್ಯದರ್ಶಿ ಯೋಗಾನಂದ್, ರೋಟರಿ ಇನರ್‍ವ್ಹೀಲ್ ಅಧ್ಯಕ್ಷೆ ನಮಿತಾ ರೈ, ರೋಟರಿ ಸಮುದಾಯ ದಳ ಅಧ್ಯಕ್ಷ ಚೊಂಡಿರ ಕಿರಣ್, ಗ್ರಾಮ ಪಂಚಾಯಿತಿ ಸದಸ್ಯರಾದ ಅನುಸೂಯ, ಎಂ.ಕೆ. ನಾಚಪ್ಪ, ಅರ್ಪಿತಾ ಸಂದ್ಯಾ, ಪೂಜಾರೀರ ರಕ್ಷಿತ್, ಪುಷ್ಪಾ ನಾಣಯ್ಯ, ಚೊಂಡಿರ ಪ್ರಕಾಶ್ ಕಾರ್ಯಪ್ಪ, ಮೇಕೇರಿ ಶಾಲಾ ಶಿಕ್ಷಕ ನಟೇಶ್, ಸ್ವಾಗತ ಯುವಕ ಸಂಘದ ಅಧ್ಯಕ್ಷ ಜೆ. ಹರೀಶ್, ಉಪಾಧ್ಯಕ್ಷ ಕೆ.ಎಸ್. ಚಂದನ್, ಕಾರ್ಯದರ್ಶಿ ಶ್ರೇಯಸ್, ಉಪ ಕಾರ್ಯದರ್ಶಿ ಕೆ.ಎಸ್. ರಾಜೇಶ್, ಖಜಾಂಚಿ ಪಿ.ಎಸ್. ಅಶ್ವಥ್, ಸದಸ್ಯರಾದ ಟಿ.ಎನ್. ಉಮೇಶ್, ಪವನ್, ಜಿತಿನ್ ಹಾಜರಿದ್ದರು. ಶಿಬಿರದಲ್ಲಿ ಡಿವೈಎಸ್‍ಪಿ ಸುಂದರ್ ರಾಜ್ ಸೇರಿದಂತೆ 40 ಮಂದಿ ಪುರುಷರು ಹಾಗೂ ಮಹಿಳೆಯರು ರಕ್ತದಾನ ಮಾಡಿದರು.
ಕುಶಾಲನಗರ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 93ನೇ ಜನ್ಮದಿನಾಚರಣೆ ಅಂಗವಾಗಿ ಕುಶಾಲನಗರದ ಬಿಜೆಪಿ ಪ್ರಮುಖರು ಸ್ಥಳೀಯ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಪ್ರಮುಖರಾದ ಜಿ.ಎಲ್.ನಾಗರಾಜ್, ಎಂ.ವಿ. ನಾರಾಯಣ, ವಿ.ಡಿ.ಪುಂಡರೀಕಾಕ್ಷ, ಮಂಜುನಾಥ್ ಸೇರಿದಂತೆ ಪ್ರಮುಖರು ಇದ್ದರು.
ಮಡಿಕೇರಿ: ಮಡಿಕೇರಿ ನಗರ ಬಿಜೆಪಿ ವತಿಯಿಂದ ರಾಷ್ಟ್ರೀಯ ಉತ್ತಮ ಆಡಳಿತ ದಿನ ಹಾಗೂ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಪ್ರಯುಕ್ತ ನಗರದ ಬಾಲಭವನದ ಮಕ್ಕಳಿಗೆ ಸಿಹಿ ಹಂಚುವದರ ಮೂಲಕ ಆಚರಿಸಲಾಯಿತು. ದಿನದ ಮಹತ್ವದ ಬಗ್ಗೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ಕೆ. ಅರುಣ್‍ಕುಮಾರ್, ನಗರ ಅಧ್ಯಕ್ಷ ಮಹೇಶ್ ಜೈನಿ ಮಾತನಾಡಿದರು.
ಈ ಸಂದರ್ಭ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ಪೂವಯ್ಯ, ಎಸ್‍ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎನ್.ಸಿ.ಸತೀಶ್, ಮಡಿಕೇರಿ ತಾಲೂಕು ಪ್ರಧಾನ ಕಾರ್ಯದರ್ಶಿ ಕೋಡಿರ ಪ್ರಸನ್ನ, ಪ್ರಮುಖರಾದ ಬಿ.ಎಂ. ರಾಜೇಶ್, ಸವಿತಾ ರಾಕೇಶ್ ಹಾಗೂ ಇನ್ನಿತರರು ಇದ್ದರು.
ಸೋಮವಾರಪೇಟೆ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಾರ್ವಜನಿಕ ಜೀವನ, ರಾಜಕಾರಣ ದೇಶದ ಐಕ್ಯತೆಯ ಪ್ರತೀಕವಾಗಿದ್ದು, ಎಲ್ಲಾ ರಾಜಕಾರಣಿಗಳಿಗೆ ಮಾದರಿಯಾದುದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಬಣ್ಣಿಸಿದರು.
ಇಲ್ಲಿನ ಶಾಸಕರ ಕಚೇರಿಯಲ್ಲಿ ವಾಜಪೇಯಿ ಅವರ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ಕಾರ್ಯಕರ್ತರಿಗೆ ಸಿಹಿ ವಿತರಿಸಿದ ನಂತರ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ರಂಜನ್, ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮೆಲುಕು ಹಾಕಿದರು.
ಮಹಿಳಾ ಸಮಾಜದ ಅಧ್ಯಕ್ಷೆ ನಳಿನಿ ಗಣೇಶ್ ಮಾತನಾಡಿ, ರಾಜಕೀಯವಾಗಿಯೂ ಆಜಾತ ಶತ್ರು ಎಂಬ ಹೆಸರು ಪಡೆದ ವಾಜಪೇಯಿಯವರು ದೇಶ ಕಂಡ ಮಹಾನ್ ನಾಯಕರು ಎಂದರು.
ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಸದಸ್ಯರಾದ ಲೀಲಾ ನಿರ್ವಾಣಿ, ಬಿ.ಎಂ. ಸುರೇಶ್, ಪಕ್ಷದ ತಾಲೂಕು ಕಾರ್ಯದರ್ಶಿ ಮನು ರೈ, ಯುವ ಮೋರ್ಚಾ ಕಾರ್ಯದರ್ಶಿ ಕೃಷ್ಣಪ್ಪ, ನಗರಾಧ್ಯಕ್ಷ ಶರತ್‍ಚಂದ್ರ, ಬಿಜೆಪಿ ನಗರಾಧ್ಯಕ್ಷ ಎಸ್.ಆರ್. ಸೋಮೇಶ್, ಮುಖಂಡರಾದ ಮಸಗೋಡು ಸತೀಶ್, ಉಷಾ ತೇಜಸ್ವಿ, ಸಂತೋಷ್‍ಕುಮಾರ್ ರೈ, ಕಿಬ್ಬೆಟ್ಟ ಆನಂದ್, ಜೆ.ಸಿ. ಶೇಖರ್, ಶಾಂತಳ್ಳಿ ಮಧು, ಹಾಲೆಬೇಲೂರು ನಿರ್ವಾಣಿ ಶೆಟ್ಟಿ, ನಂದ, ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಿದ್ದಾಪುರ: ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಬಿ.ಜೆ.ಪಿ. ಸ್ಥಾನೀಯ ಸಮಿತಿಯ ವತಿಯಿಂದ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ನಂತರ ಜಿಲ್ಲಾ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್ ಮಾತನಾಡಿ ಮಾಜಿ ಪ್ರಧಾನಿ ವಾಜಪೇಯಿರವರು ರಾಜಕೀಯದ ಭೀಷ್ಮಾಚಾರಿಯಾಗಿದ್ದು, ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಹಾಗೂ ವಿಶ್ವಕ್ಕೆ ಉತ್ತಮ ಸಂದೇಶ ನೀಡಿದ ಮಹಾನ್ ನಾಯಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯ ಜನೀಶ್, ಗ್ರಾ.ಪಂ. ಉಪಾಧ್ಯಕ್ಷ ನಿತೀಶ್, ಸಿದ್ದಾಪುರ ಸ್ಥಾನೀಯ ಸಮಿತಿ ಕೆ.ಡಿ. ನಾಣಯ್ಯ, ಮುಖಂಡರುಗಳಾದ ಬಿ.ಕೆ. ಅನಿಲ್‍ಶೆಟ್ಟಿ, ಕೆ.ಪಿ. ಪ್ರಭಾಕರ್, ಎಂ.ಎ. ಆನಂದ, ರತೀಶ್, ರೂಪೇಶ್, ದಿಲೀಪ್, ಪ್ರಶಾಂತ್, ವಸಂತ್ ಕುಮಾರ್, ಶಿವದಾಸ್ ಹಾಗೂ ವೈದ್ಯಾಧಿಕಾರಿ ಡಾ|| ರಾಘವೇಂದ್ರ ಇತರರು ಹಾಜರಿದ್ದರು.