ಸರಳ ಸಜ್ಜನಿಕೆಯ, ಪರ ಹಿತ ಚಿಂತನೆಯ, ಔದಾರ್ಯದ ಪ್ರತೀಕವೆನಿಸಿದ್ದ, ಓರ್ವ ಪ್ರಾಯೋಗಿಕ ದಾರ್ಶನಿಕನನ್ನು ಕೊಡಗು ಕಳೆದುಕೊಂಡಿದೆ.

ನನ್ನ ಮತ್ತು ಬಿದ್ದಾಟಂಡ ಬೆಳ್ಯಪ್ಪ ಅವರ ನಡುವೆ ಅವಿನಾಭಾವ ಬಾಂಧವ್ಯವಿತ್ತು. ಅವರ ಕೌಟುಂಬಿಕ ಸಮಾರಂಭಗಳಲ್ಲಿ ಭಾಗವಹಿಸುವ ಸನ್ನಿವೇಶ ಒದಗಿತ್ತು.

ಬೆಳ್ಯಪ್ಪ ಅವರು ಲಯನ್ಸ್ ಸಂಸ್ಥೆ, ರಾಮಾ ಟ್ರಸ್ಟ್ , ಕೊಡವ ಸಮಾಜ, ಕೊಡವ ಹಾಕಿ ಇತ್ಯಾದಿ ಸೇವಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದುದನ್ನು ಕೇಳಿದ್ದೆ. ಆದರೆ, ಅವರು ಅಶ್ವಿನಿ ಆಸ್ಪತ್ರೆಯ ಓರ್ವ ಹಳೆಯ ಟ್ರಸ್ಟಿಯಾಗಿ ಹಾಗೂ ನಾನು ಈ ಸಂಸ್ಥೆಯ ಇತ್ತೀಚಿಗಿನ ಕಾರ್ಯದರ್ಶಿಯಾಗಿ ಅವರೊಂದಿಗಿನ ಒಡನಾಟ ನಿಕಟವಾಗಿತ್ತು.

ಈ ಸಂದರ್ಭ ಅವರೊಂದಿಗೆ ಬೆರೆತು ಓಡಾಡಿದ ಸಂದರ್ಭವನ್ನು ನಾನು ಇಲ್ಲಿ ಜ್ಞಾಪಿಸಿಕೊಳ್ಳಲೇಬೇಕಾಗಿದೆ.

ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಿಂದ ಪ್ರತಿ ವರ್ಷ ಉಚಿತ ನೇತ್ರ ಚಿಕಿತ್ಸಾ ಶಿಬಿರ ನಡೆಸಲಾಗುತ್ತಿದೆ. ನಾಪೋಕ್ಲು ಮತ್ತು ಸುತ್ತಮುತ್ತಲಿನ ವಿಭಾಗಗಳಲ್ಲಿ ಬೆಳ್ಯಪ್ಪ ಅವರು ಪ್ರತಿ ವರ್ಷವೂ ಶಿಬಿರಕ್ಕೆ ಉದಾರ ಧನ ಸಹಾಯ ಸಂಗ್ರಹಿಸಿ ಕೊಡುತ್ತಿದ್ದರು. ನಾಮಕಾವಸ್ಥೆಗೆ ಕಾರ್ಯದರ್ಶಿಯಾಗಿ ನಾನು ಸಂಗ್ರಹಾತಿಗೆ ಹೋಗುತ್ತಿದ್ದೆÉ. ಆದರೆ, ಅವರು ಸಂಸ್ಥೆಯ ಪರವಾಗಿ ನನ್ನನ್ನು ಕರೆಯತ್ತ್ತಿದ್ದುದು ಕೇವಲ ಗೌರವ ಸೂಚಕವಾಗಿತ್ತು. ಏಕೆಂದರೆ, ನಾನು ಅಲ್ಲಿಗೆ ತೆರಳಿದಾಗ ಬೆಳ್ಯಪ್ಪ ಅವರು ಮೊದಲ ದಿನವೇ ಎಲ್ಲರೊಂದಿಗೆ ದೂರವಾಣಿ ಮೂಲಕ ಮಾತನಾಡಿ ನಾಳೆ ಇಂತಹವರು ಬರುತ್ತಾರೆ. ಹಣ ಜೋಡಿಸಿಡಿ ಎಂದು ಪೂರ್ವ ಸೂಚನೆ ನೀಡುತ್ತಿದ್ದರು. ಅವರೊಂದಿಗೆ ತೆರಳುವ ಕೆಲಸ ಮಾತ್ರ ನನ್ನದಾಗಿತ್ತು. ನಾವು ಉದಾರ ದಾನಿಗಳ ಬಳಿ ತೆರಳಿದಾಗ ತಕ್ಷಣವೇ ಉದಾರಿಗಳು ಹಣ ನೀಡುತ್ತಿದ್ದರು. ಬೆಳ್ಯಪ್ಪ ಅವರು ತಮ್ಮ ಊರಿನ ಮಂದಿಯೊಂದಿಗೆ ಎಷ್ಟೊಂದು ನಿಕಟ ಬಾಂಧವ್ಯ ಇರಿಸಿಕೊಂಡಿದ್ದರು ಎಂಬದರ ದ್ಯೋತಕವಿದು. ಹಿಂದೂ, ಮುಸ್ಲಿಂ, ಕ್ರೈಸ್ತರೆಂಬ ಬೇಧವಿಲ್ಲದೆ ಬೆಳ್ಯಪ್ಪ ಅವರು ತೆರಳಿದಾಗ ಧನ ಸಹಾಯ ನೀಡುತ್ತಿದ್ದು ಅವರ ಸಜ್ಜನಿಕೆಗೆ ಹಿಡಿದ ಕೈಗನ್ನಡಿ. ನಿಜಕ್ಕೂ ನಾಪೋಕ್ಲು ವಿಭಾಗದಲ್ಲಿ ಇಷ್ಟೊಂದು ಮಂದಿ ಉದಾರ ಮನಸ್ಸಿನ ಜನರಿದ್ದಾರೆ ಎಂಬದು ನನಗೆ ಗೊತ್ತಾದುದು ಆಗಲೇ. ಅದಕ್ಕೆ ಮುಖ್ಯ ಕಾರಣ ಬೆಳ್ಯಪ್ಪ ಅವರು ಎಲ್ಲರೊಂದಿಗೆ ಬೆಳೆಸಿಕೊಂಡಿದ್ದ ವಿಶಾಲ ಸ್ನೇಹ ಪರತೆ ಎನ್ನುವದಂತೂ ದಿಟ.. ನಾಪೋಕ್ಲುವಿನ ಹೆಚ್ಚಿನ ಉದಾರ ದಾನಿಗಳು “ಇನ್ನೊಬ್ಬರಿಗೆ ನೇತ್ರ ದೃಷ್ಟಿ ನೀಡುವ ಈ ನಿಮ್ಮ ಪವಿತ್ರ ಕೆಲಸಕ್ಕೆ ನಮ್ಮದೊಂದು ಸಣ್ಣ ಕಾಣಿಕೆ” ಎಂಬ ಮನೋಭಾವದಿಂದ ಧನ ಸಹಾಯ ನೀಡಿದಾಗ ನಿಜಕ್ಕೂ ನನಗೆ ಅರಿವಿಲ್ಲದೆಯೇ ಆನಂದಭಾಷ್ಪ ಮೂಡಿತ್ತ್ತು. ಇದಕ್ಕೆ ಕಾರಣ ಬೆಳ್ಯಪ್ಪ ಅವರ ಪರಹಿತ ಕಾಳಜಿ ಹಾಗೂ ಅವರ ಕಾಳಜಿಗೆ ಸ್ಪಂದಿಸುವ ಉದಾರ ಜನರ ಹೃದಯ ಮಿಡಿತ.

ನಾನು ಸಂಗ್ರಹಾತಿಗೆ ತೆರಳಿದಾಗ ಬೆಳ್ಯಪ್ಪ ಅವರು ತಮ್ಮ ಮನೆಯಲ್ಲ್ಲಿಯೇ ಸಸ್ಯಾಹಾರಿ ವಿಶೇಷ ಊಟದ ವ್ಯವಸ್ಥೆ ಕಲ್ಪಿಸುತ್ತಿದ್ದರು. ಅವರ ಕುಟುಂಬದ ಎಲ್ಲ ಸದಸ್ಯರು ನಗುನಗುತ್ತ ಬಡಿಸುತ್ತ, ಒಟ್ಟಿಗೆ ಭೋಜನ ಸ್ವೀಕರಿಸಿದ್ದ ನೆನಪು ಬಂದಾಗ ಬೆಳ್ಯಪ್ಪ ಅವರಂತಹ ಸುಸಂಸ್ಕøತರನ್ನು ಕಳೆದುಕೊಂಡ ದು:ಖದ ಭಾರದೊಂದಿಗೆ ಅವರೊಂದಿಗಿನ ಕೆಲವು ಸವಿ ಸನ್ನಿವೇಶಗಳು ಅವಿಸ್ಮರಣಿಯವಾಗಿ ಅವರ ನೆನಪನ್ನು ಉಳಿಸುವಂತಾಗಿಸಿದೆ. –ಜಿ.ರಾಜೇಂದ್ರ