ಪೊನ್ನಂಪೇಟೆ, ಡಿ. 22: ಕಂಡಂಗಾಲದ ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್ (ಯು.ಎಸ್.ಸಿ) ಬೇರಳಿನಾಡ್ ವತಿಯಿಂದ ಹಾಕಿ ಕೂರ್ಗ್‍ನ ಸಹಯೋಗದಲ್ಲಿ ಕಂಡಂಗಾಲದ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ಶುಕ್ರವಾರದಿಂದ ಆರಂಭಗೊಂಡ 5ನೇ ವರ್ಷದ ಚಂದೂರ ಕಮಲ ಸ್ಮಾರಕ ಆಹ್ವಾನಿತ ತಂಡಗಳ ಜಿಲ್ಲಾ ಮಟ್ಟದ ಪುರುಷರ ಹಾಕಿ ಪಂದ್ಯಾವಳಿ ‘ಲೋಟಸ್ ಕಪ್ 2017’ರಲ್ಲಿ 5 ತಂಡಗಳು ಮುನ್ನಡೆ ಸಾಧಿಸಿ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿವೆ.
ಕಂಡಂಗಾಲದ ಯು.ಎಸ್.ಸಿ. ಬೇರಳಿನಾಡು (ಗ್ರೀನ್), ಗೋಣಿಕೊಪ್ಪಲಿನ ಬಿ.ಬಿ.ಸಿ, ಡ್ರಿಬಲರ್ಸ್ ಹ್ಯಾಂಪ್ ಕುತ್ತುನಾಡು, ಬೇಗೂರಿನ ಈಶ್ವರ ಯೂತ್ ಕ್ಲಬ್ ಮತ್ತು ಕಂಡಂಗಾಲದ ಯು.ಎಸ್.ಸಿ. ಬೇರಳಿನಾಡ್ (ರೆಡ್) ತಂಡಗಳು ಎದುರಾಳಿ ತಂಡಗಳನ್ನು ಮಣಿಸಿ ಮೇಲುಗೈ ಸಾಧಿಸಿತು. ಈ ಪೈಕಿ 2ನೇ ಪಂದ್ಯದಲ್ಲಿ ವಿಜೇತ ಗೋಣಿಕೊಪ್ಪಲು ಬಿ.ಬಿ.ಸಿ. ತಂಡದ ಸುಬ್ಬಯ್ಯ ಮತ್ತು ಪರಾಜಿತ ಹಾತೂರು ಸ್ಪೋಟ್ರ್ಸ್ ಕ್ಲಬ್ ತಂಡದ ಗಣಪತಿ ಹ್ಯಾಟ್ರಿಕ್ ಸಾಧನೆಗೈದು ಗಮನ ಸೆಳೆದರು.
ದಿನದ ಮೊದಲ ಪಂದ್ಯದಲ್ಲಿ ಕಂಡಂಗಾಲದ ಯು.ಎಸ್.ಸಿ. ಬೇರಳಿನಾಡು (ಗ್ರೀನ್) ತಂಡ ವಿ. ಬಾಡಗದ ಆರ್.ಎಸ್.ಸಿ ತಂಡವನ್ನು 4-3 ಗೋಲುಗಳಿಂದ ಪರಾಭವಗೊಳಿಸಿತು. ಪಂದ್ಯದ ಪ್ರಥಮಾರ್ಧದ 16ನೇ ನಿಮಿಷದಲ್ಲಿ ಆರ್.ಎಸ್.ಸಿ. ತಂಡದ ಗೌರವ್ ಮಿಂಚಿನ ಫೀಲ್ಡ್ ಗೋಲೊಂದನ್ನು ಬಾರಿಸಿ ತಂಡದ ಖಾತೆ ತೆರೆದರು. ಇದಾದ ಮರುನಿಮಿಷದಲ್ಲೆ ವಿಜೇತ ತಂಡದ ಪಪ್ಪು 17ನೇ ನಿಮಿಷದಲ್ಲಿ ಗೋಲೊಂದನ್ನು ಬಾರಿಸಿ ಅಂತರವನ್ನು ಸಮನಾಗಿಸಿದರು. ಬಳಿಕ ಆರ್.ಎಸ್.ಸಿ. ತಂಡದ ಪ್ರಜ್ವಲ್ 26ನೇ ನಿಮಿಷದಲ್ಲಿ ಅತಿಥಿ ಆಟಗಾರ ಧನುಮಂತ್ರಿ 30ನೇ ನಿಮಿಷದಲ್ಲಿ ತಲಾ ಒಂದು ಗೋಲು ಬಾರಿಸಿ ತಂಡದ ಅಂತರ ಹೆಚ್ಚಿಸಿದರು. ಇದರಿಂದ ಆಟದ ತೀವ್ರತೆಯನ್ನು ಹೆಚ್ಚಿಸಿದ ವಿಜೇತ ತಂಡದ ಭರತ್ 46ನೇ ನಿಮಿಷದಲ್ಲಿ ಫೀಲ್ಡ್ ಗೋಲು ಬಾರಿಸಿ ಹಾಗೂ ಬೋಪಣ್ಣ 49ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್‍ನಿಂದಾಗಿ ಗೋಲು ಬಾರಿಸಿ ಅಂತರವನ್ನು 3-3ಕ್ಕೆ ಸಮನಾಗಿಸಿದರು. ಈ ಹಿನ್ನೆಲೆಯಲ್ಲಿ ಪಂದ್ಯದ ವಿಜಯ ಶೂಟೌಟ್ ಮೂಲಕ ನಿರ್ಧರಿಸಿದಾಗ ವಿಜೇತ ತಂಡದ ಪರ ಅತಿಥಿ ಆಟಗಾರ ಜಿಶಂತ್ ಮಾತ್ರ ಏಕೈಕ ಗೋಲು ದಾಖಲಿಸಿ ತಂಡವನ್ನು ವಿಜಯದ ದಡ ಸೇರಿಸಿದರು. ಶೂಟೌಟ್‍ನಲ್ಲಿ ಪರಾಜಿತ ತಂಡದ ಪರ ಯಾವದೇ ಗೋಲು ದಾಖಲಾಗಲಿಲ್ಲ.
2ನೇ ಪಂದ್ಯದಲ್ಲಿ ಗೋಣಿಕೊಪ್ಪಲಿನ ಬಿ.ಬಿ.ಸಿ. ತಂಡ ಹಾತೂರಿನ ಹಾತೂರು ಸ್ಪೋಟ್ರ್ಸ್ ಕ್ಲಬ್ ತಂಡವನ್ನು 5-3 ಗೋಲುಗಳಿಂದ ಸೋಲಿಸಿತು. ವಿಜೇತ ತಂಡದ ಪರ ಸುಬ್ಬಯ್ಯ 31,36 ಮತ್ತು 48ನೇ ನಿಮಿಷದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದರೆ, ಪರಾಜಿತ ತಂಡದ ಪರ ಗಣಪತಿ 20, 22 ಮತ್ತು 33ನೇ ನಿಮಿಷದಲ್ಲಿ ಹ್ಯಾಟ್ರಿಕ್ ಗೋಲು ದಾಖಲಿಸಿ ತಂಡದ ಅಂತಹವನ್ನು ಸಮನಾಗಿಸಿದರು. ಇದರಿಂದ ಪಂದ್ಯದ ವಿಜಯ ನಿರ್ಣಯಕ್ಕಾಗಿ ಶೂಟೌಟ್ ಅಳವಡಿಸಿದಾಗ ವಿಜೇತ ತಂಡದ ಪರ ಶಿರಾಗ್ ಮತ್ತು ಶಕ್ತಿ ತಲಾ ಒಂದು ಗೋಲು ಬಾರಿಸಿ ಗೆಲುವಿಗೆ ಕಾರಣರಾದರು. ಶೂಟೌಟ್‍ನಲ್ಲಿ ಪರಾಜಿತ ತಂಡದ ಪರ ಯಾವದೇ ಗೋಲು ದಾಖಲಾಗಲಿಲ್ಲ.
3ನೇ ಪಂದ್ಯದಲ್ಲಿ ವೀರಾಜಪೇಟೆಯ ಟವರ್ಸ್ ಇಲವೆನ್ ತಂಡ ಗೈರು ಹಾಜರಾದ ಕಾರಣ ಕುತ್ತುನಾಡಿನ ಡ್ರಿಬಲರ್ಸ್ ಹ್ಯಾಂಪ್ ತಂಡ ವಾಕ್ ಓವರ್ ಮೂಲಕ ಮುಂದಿನ ಹಂತಕ್ಕೆ ಅರ್ಹತೆ ಪಡೆಯಿತು. 4ನೇ ಪಂದ್ಯದಲ್ಲಿ ಬೇಗೂರಿನ ಈಶ್ವರ ಯೂತ್ ಕ್ಲಬ್ ತಂಡ ಅಮ್ಮತ್ತಿಯ ಈಗಲ್ಸ್ ತಂಡವನ್ನು 2-0 ಗೋಲುಗಳಿಂದ ಸೋಲಿಸಿತು. ವಿಜೇತ ತಂಡದ ಪರ ಅತಿಥಿ ಆಟಗಾರ ಮಿಲನ್ 22ನೇ ನಿಮಿಷದಲ್ಲಿ ಫೀಲ್ಡ್ ಸ್ಟ್ರೋಕ್ ಗೋಲು ಬಾರಿಸಿದರೆ ತಂಡದ ಮತ್ತೋರ್ವ ಮಿಲನ್ 42ನೇ ನಿಮಿಷದಲ್ಲಿ ಫೀಲ್ಡ್ಡ್ ಗೋಲು ಬಾರಿಸಿ ತಂಡದ ವಿಜಯಕ್ಕೆ ನೆರವಾದರು.
ಕೊನೆಯ ಪಂದ್ಯದಲ್ಲಿ ಕಂಡಂಗಾಲದ ಯು.ಎಸ್.ಸಿ. ಬೇರಳಿನಾಡ್ (ರೆಡ್) ತಂಡ ಬೊಟ್ಯತ್‍ನಾಡ್ ಕುಂದ ತಂಡವನ್ನು 6-2 ಗೋಲುಗಳಿಂದ ಮಣಿಸಿ ಮುನ್ನಡೆ ಸಾಧಿಸಿತು. ವಿಜೇತ ತಂಡದ ಪರ ಬೋಪಣ್ಣ 11ನೇ ನಿಮಿಷದಲ್ಲಿ, ಅತಿಥಿ ಆಟಗಾರ ಸಂತೋಷ್ 21ನೇ ಮತ್ತು 33ನೇ ನಿಮಿಷದಲ್ಲಿ, ಕಾಳಪ್ಪ 32ನೇ ನಿಮಿಷದಲ್ಲಿ ಹಾಗೂ ಅತಿಥಿ ಆಟಗಾರ ಪ್ರಮೋದ್ 39ನೇ ಮತ್ತು 41ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡದ ಅಂತರ ಹೆಚ್ಚಿಸಿದರು. ಪರಾಜಿತ ತಂಡದ ಪರ ಅತಿಥಿ ಆಟಗಾರರಾದ ದಿನೇಶ್ 36ನೇ ನಿಮಿಷದಲ್ಲಿ ಮದನ್ 38ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.
ಪಂದ್ಯದ ತೀರ್ಪುಗಾರರಾಗಿ ಕೋಡಿಮಣಿಯಂಡ ಗಣಪತಿ, ಕುಪ್ಪಂಡ ದಿಲನ್, ಚೋಯಮಾಡಂಡ ಚಂಗಪ್ಪ, ಚೆಯ್ಯಂಡ ಅಪ್ಪಚ್ಚು, ಕೊಕ್ಕಂಡ ರೋಶನ್, ನೆಲ್ಲಮಕ್ಕಡ ಪವನ್, ಕಾಟುಮಣಿಯಂಡ ಕಾರ್ತಿಕ, ಮೇಕತಂಡ ಟೀಸಾ ಕಾರ್ಯಪ್ಪ ಮತ್ತು ಕೊಂಡೀರ ಕೀರ್ತಿ ಕಾರ್ಯನಿರ್ವಹಿಸಿದರೆ ತಾಂತ್ರಿಕ ಸಮಿತಿಯಲ್ಲಿ ದರ್ಶನ್ ಅಪ್ಪಣ್ಣ, ಜೆ.ಸಿ.ಬಿ. ವಿನೋದ್ ಮತ್ತು ಚಿಟ್ಟಿಯ್ಯಪ್ಪ ಕೆಲಸ ಮಾಡಿದರು.
ಪಂದ್ಯಾವಳಿಯ ನಿರ್ದೇಶಕರಾಗಿ ಮೂಕಚಂಡ ನಾಚಪ್ಪ ಕಾರ್ಯನಿರ್ವಹಿಸಿದರೆ, ಅಜ್ಜಮಾಡ ಪೊನ್ನಪ್ಪ ವೀಕ್ಷಕ ವಿವರಣೆ ನೀಡಿದರು. ಆಯೋಜನಾ ಸಮಿತಿಯ ಮೂಕಚಂಡ ಪ್ರಸನ್ನ ಪಂದ್ಯಾವಳಿಯ ಮೇಲುಸ್ತುವಾರಿ ವಹಿಸಿದ್ದರು.