ಮಡಿಕೇರಿ, ಡಿ. 21 : ತಾಲೂಕು ಕಚೇರಿ, ಕಂದಾಯ ಕಚೇರಿಗಳಲ್ಲಿ ಲಂಚಗುಳಿತನ, ಭ್ರಷ್ಟಾಚಾರ, ಬ್ರೋಕರ್‍ಗಳ ಹಾವಳಿ ತಡೆಯಲು ಮುಖ್ಯವಾಗಿ ಅಧಿಕಾರಿಗಳಲ್ಲಿ ಕಾಯ್ದೆ ಕಾನೂನುಗಳ ಬಗ್ಗೆ ತಿಳುವಳಿಕೆಯಿರಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಮಾರ್ಗದರ್ಶನದ ಅಗತ್ಯವಿದೆ. ಹಾಗಾದರೆ ಮಾತ್ರ ಭ್ರಷ್ಟಾಚಾರವನ್ನು ತಡೆಯಬಹುದಾಗಿದೆ. ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿನ ಭ್ರಷ್ಟಾಚಾರದ ವಿಷಯವಾಗಿ ಈಗಾಗಲೇ ಹಲವಾರು ಬಾರಿ ಪತ್ರಿಕೆಯಲ್ಲಿ ಪ್ರಸ್ತಾಪಿಸಲಾಗಿದೆ. ಈ ವಿಚಾರದಲ್ಲಿ ತಹಶೀಲ್ದಾರರು ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಾಲೂಕು ಕಚೇರಿಯಲ್ಲಿ ಲಂಚಗುಳಿತನ ಮತ್ತು ಭ್ರಷ್ಟಾಚಾರ, ಬ್ರೋಕರುಗಳನ್ನು ತಡೆಗಟ್ಟಲು ಸಾರ್ವಜನಿಕರ ತಿಳುವಳಿಕೆ ಬಗ್ಗೆ ಕಚೇರಿಯಲ್ಲಿ ಬ್ಯಾನರ್‍ಗಳನ್ನು ಅಳವಡಿಸುವದಾಗಿ ತಿಳಿಸಿರುತ್ತಾರೆ. ಆದರೆ ಇದೊಂದು ಹಾಸ್ಯಾಸ್ಪದ ಹೇಳಿಕೆಯಾಗಿರುತ್ತದೆ. ತಾಲೂಕು ಕಚೇರಿಯಲ್ಲಿ ಈ ಹಿಂದೆ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆಯೆಂದು ಪ್ರಚಾರಗಿಟ್ಟಿಸಿ ಕೊಂಡಿದ್ದು, ಈಗ ಇದು ಹೇಳ ಹೆಸರಿಲ್ಲದಂತಾಗಿದೆ. ಬ್ರೋಕರುಗಳನ್ನು ತಡೆಗಟ್ಟಲು ಬ್ಯಾನರ್‍ಗಳನ್ನು ಅಳವಡಿಸಿದ ಮಾತ್ರಕ್ಕೆ ಭ್ರಷ್ಟಾಚಾರ ಮತ್ತು ಲಂಚಗುಳಿತನವನ್ನು ತಡೆಗಟ್ಟಲು ಸಾಧ್ಯವಾಗುವದಿಲ್ಲ. ಲಂಚಗುಳಿತನವು ಎಲ್ಲಾ ಸಮಯದಲ್ಲಿ ಕಚೇರಿಯಲ್ಲೇ ನಡೆಯುವದಿಲ್ಲ. ಸಾಮಾನ್ಯವಾಗಿ ಬೀದಿಗಳಲ್ಲಿ, ಹೊಟೇಲ್‍ಗಳಲ್ಲಿ ಮತ್ತು ಬಾರ್ ಎಂಡ್ ರೆಸ್ಟೋರೆಂಟ್‍ಗಳಲ್ಲಿ ಫಲಾನುಭವಿಗಳಿಂದ ನೇರವಾಗಿ ಅಥವಾ ಬ್ರೋಕರುಗಳ ಮುಖಾಂತರ ನಡೆಯುತ್ತದೆ. ಹೀಗಿರುವಾಗ ಕಚೇರಿಯಲ್ಲಿ ಬ್ಯಾನರ್ ಅಳವಡಿಸಿದ ಮಾತ್ರಕ್ಕೆ ಏನೂ ಸಾಧನೆ ಮಾಡಿದಂತಾಗುವದಿಲ್ಲ. ಸರಕಾರಿ ಸಿಬ್ಬಂದಿಗಳು ಮತ್ತು ಕಚೇರಿ ಮುಖ್ಯಸ್ಥರು ಸಮಯ ಪ್ರಜ್ಞೆ-ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡಲ್ಲಿ ಮಾತ್ರ ಭ್ರಷ್ಟಾಚಾರವನ್ನು ತಡೆಗಟ್ಟುವಲ್ಲಿ ಸಹಕಾರಿ ಆಗಬಹುದು.

ಕಚೇರಿ ಕೆಲಸಗಳ ನಿರ್ವಹಣೆಯಲ್ಲಿ ಸಮಯ ಪ್ರಜ್ಞೆ ಮತ್ತು ಶಿಸ್ತು ಹಾಗೂ ಪ್ರಾಮಾಣಿಕತೆ ಬಹಳ ಮುಖ್ಯವಾದದ್ದು ಎಲ್ಲಾ ಸಿಬ್ಬಂದಿಗಳು ಹಾಗೂ ಕಚೇರಿಯ ಮುಖ್ಯಸ್ಥರು ಸಮಯಕ್ಕೆ ಸರಿಯಾಗಿ ಕಚೇರಿಗೆ ಬಂದು ಹಾಜರಾತಿ ಹಾಕಿ ಕೆಲಸ ನಿರ್ವಹಿಸಿದಲ್ಲಿ ಹಾಗೂ ಲಂಚಕ್ಕೆ ಆಸೆ ಪಡದೆ ನಿಷ್ಠೆಯಿಂದ ಕೆಲಸ ನಿರ್ವಹಿಸಿದಲ್ಲಿ ಆಡಳಿತದಲ್ಲಿ ಬಹಳಷ್ಟು ಸುಧಾರಣೆಗಳನ್ನು ಸಾಧಿಸಬಹುದು. ಸೋಮವಾರಪೇಟೆ ತಾಲೂಕು ಕಚೇರಿಯ ವಿಷಯದಲ್ಲಿ ಹೇಳುವದಾದರೆ ಇಲ್ಲಿ ಪ್ರತಿದಿನ ಬಹಳಷ್ಟು ಸಿಬ್ಬಂದಿಗಳು, ಕುರ್ಚಿಗಳು ಖಾಲಿ ಇರುತ್ತದೆ. ಬಹಳಷ್ಟು ಸಿಬ್ಬಂದಿಗಳು ಆಗೊಮ್ಮೆ, ಈಗೊಮ್ಮೆ ಕಚೇರಿಗೆ ಬಂದು ಕುಳಿತು ಹೋಗುವದು, ಕಚೇರಿಯ ಹೊರಗಡೆ ಸುತ್ತಾಡಿಕೊಂಡಿರುವದು ಅರ್ಜಿದಾರರು ಬಂದು ತಮ್ಮ ಕಡತಗಳ ಬಗ್ಗೆ ಕಚೇರಿಗೆ ಬಂದು ಹಾಜರಿರುವ ಸಿಬ್ಬಂದಿಗಳನ್ನು ವಿಚಾರಿಸಿದಾಗ, ಕಚೇರಿ ಕೆಲಸಕ್ಕಾಗಿ ಇತರೆ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ ಅಥವಾ ನ್ಯಾಯಾಲಯಕ್ಕೆ ಹೋಗಿರುತ್ತಾರೆಂದು ಸಬೂಬು ಹೇಳುತ್ತಾರೆ. ಕಚೇರಿಗೆ ಬಂದ ಅರ್ಜಿದಾರರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂದಕ್ಕೆ ಹೋಗುತ್ತಾರೆ. ಇದು ಕಚೇರಿಯಲ್ಲಿ ಸಾಮಾನ್ಯವಾಗಿರುತ್ತದೆ.

ಸರಕಾರಿ ಕಚೇರಿಗಳಲ್ಲಿ ಬಹಳಷ್ಟು ಹುದ್ದೆಗಳು ಖಾಲಿಯಿರುವದು ಒಂದೆಡೆಯಾದರೆ ಇರುವ ಸಿಬ್ಬಂದಿಗಳು ದಕ್ಷತೆಯಿಂದ ಕೆಲಸ ಮಾಡುವದಿಲ್ಲ ಇನ್ನು ಬಹಳಷ್ಟು ಸಿಬ್ಬಂದಿಗಳು ಅನುಕಂಪದ ಆಧಾರದಲ್ಲಿ ಸೇವೆಗೆ ಸೇರುತ್ತಾರೆ. ಇವರಿಗೆ ಕಚೇರಿ ಕೆಲಸದ ಬಗ್ಗೆ ತಿಳಿವಳಿಕೆ ಇರುವದಿಲ್ಲ. ಇವರಿಗೆ ಅಗತ್ಯ ತರಬೇತಿ ನೀಡುವ ವ್ಯವಸ್ಥೆಯಿರುವದಿಲ್ಲ ಕಂದಾಯ ಇಲಾಖೆಯು ಸರಕಾರದ ಎಲ್ಲಾ ಕಚೇರಿಗಳಿಗೂ ಮಾತೃ ಇಲಾಖೆ ಎಂಬ ಹೆಸರಿರುತ್ತದೆ. ಕಂದಾಯ ಇಲಾಖೆಯಲ್ಲಿ ತಹಶೀಲ್ದಾರರುಗಳಿಗೆ ತಾಲೂಕು ದಂಡಾಧಿಕಾರಿಗಳ ಅಧಿಕಾರ ವ್ಯಾಪ್ತಿಯಿರುತ್ತದೆ. ದಂಡಾಧಿಕಾರಿಗಳ ಅಧಿಕಾರಿತನವನ್ನು ಚಲಾಯಿಸುವಲ್ಲಿ ಇವರಿಗೆ ಪರಿಪೂರ್ಣವಾದ ತಿಳುವಳಿಕೆಯಿರಬೇಕಾಗುತ್ತದೆ. ಹಾಗೇಯೇ ನ್ಯಾಯಾಂಗ ಕಚೇರಿಯ ಸಿಬ್ಬಂದಿಗಳು ಸದಾ ನ್ಯಾಯಾಂಗ ಶಾಖೆಗೆ ಸಂಬಂದಿಸಿದಂತೆ ಕಾಯಿದೆ ಮತ್ತು ನಿಯಮಗಳ ಬಗ್ಗೆ ಪರಿಪೂರ್ಣತೆ ಹೊಂದಿರಬೇಕಾಗಿರುತ್ತದೆ. ಅಲ್ಲದೆ ಕಂದಾಯ ಇಲಾಖೆಗೆ ಸಂಬಂದಿಸಿದಂತೆ ಕ. ಭೂ. ಕ. ಕಾಯಿದೆ, ಭೂ ಸುಧಾರಣೆ ಕಾಯಿದೆ ಹಾಗೂ ಇನ್ನೂ ಹಲವಾರು ಕಾಯಿದೆಗಳು ಕಂದಾಯ ಇಲಾಖೆಯ ಅಧಿಕಾರ ವ್ಯಾಪ್ತಿಯಲ್ಲಿ ಬರುತ್ತದೆ. ಈ ಸಂಬಂಧ ಸರಕಾರದಿಂದ ಆಗಿಂದಾಗ್ಗೆ ಸಮಯೋಚಿತ ಸುತ್ತೋಲೆಗಳನ್ನು ಹೊರಡಿಸಲಾಗುತ್ತದೆ. ಇದರಡಿಯಲ್ಲೇ ಕಚೇರಿ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ. ಆದರೆ ದುರದೃಷ್ಟವೆಂದರೆ ಇತ್ತೀಚಿನ ದಿನಗಳಲ್ಲಿ ಕಾಯಿದೆಗಳನ್ನಾಗಲಿ, ಸುತ್ತೋಲೆಗಳನ್ನಾಗಲಿ ನೋಡಿಯೇ ಇರದ ಬಹಳಷ್ಟು ಸಿಬ್ಬಂದಿಗಳಿರುತ್ತಾರೆ. ಈ ರೀತಿ ಕಾಯಿದೆ ಹಾಗೂ ಸುತ್ತೋಲೆಗಳನ್ನು ಪರಿಶೀಲಿಸದೆ ಬಹಳಷ್ಟು ಸಿಬ್ಬಂದಿಗಳು ತಮಗೆ ತಿಳಿದದ್ದೇ ಸರಿ ಎಂಬಂತೆ ಕಡತಗಳನ್ನು ತಯಾರಿಸಿ ಅದು ಅತ್ತ ಅಂಗೀಕಾರವಾಗÀದೆ ಇತ್ತ ತಿರಸ್ಕøತವಾಗÀದೆ ಅರ್ಜಿದಾರರು ಕಚೇರಿಯ ಮೇಜಿನಿಂದ, ಮೇಜಿಗೆ ಅಲೆದಾಡಿ ಕೊನೆಗೆ ಸುಸ್ತಾಗಿ ಬ್ರೋಕರುಗಳ ಬಲೆಗೆ ಸಿಲುಕಿ ಹೈರಾಣಾಗುವುದು ಸಾಮಾನ್ಯವಾಗಿರುತ್ತದೆ. ಕಚೇರಿ ಸಿಬ್ಬಂದಿಗಳು ನಿಯಮಾನುಸಾರವಾಗಿ ಕಾಯಿದೆಗಳಲ್ಲಿನ ಅವಕಾಶಗಳನ್ನು ಅರಿತು ಕೆಲಸ ನಿರ್ವಹಿಸಿದಲ್ಲಿ ಈ ರೀತಿಯ ವಿಳಂಬ ಮತ್ತು ತೊಂದರೆಗಳಿಗೆ ಅವಕಾಶವಿರುವುದಿಲ್ಲ.

ತಾಲೂಕು ಕಚೇರಿಯ ಸಿಬ್ಬಂದಿಗಳ ಕಚೇರಿ ವ್ಯವಹಾರದಲ್ಲಿ ಸಾಮಾನ್ಯ ತಿಳಿವಳಿಕೆ ಬಗ್ಗೆ ಹೇಳುವುದಾದರೆ ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ಒಂದು ಮಹತ್ವದ ಶಾಖೆಯನ್ನು ನಿರ್ವಹಿಸಲು ಗುಮಾಸ್ತರಿಗೆ, ಕಚೇರಿಯಿಂದ ಬರೆಯುವ ಅರೆಸರಕಾರಿ ಪತ್ರ (ಅಂದರೆ ಇಂಗ್ಲೀಷಿನಲ್ಲಿ ‘‘ಆ.ಔ. ಟeಣಣeಡಿ’’ಎಂದು ಕರೆಯಲಾಗುತ್ತದೆ) ಎಂದರೆ ಗೊತ್ತಿಲ್ಲ. ಆದರೆ ಆ ಗುಮಾಸ್ತರು ತನ್ನ ಬಳಿ ಬರುವ ಅರ್ಜಿದಾರರಿಗೆ ಎಕರೆವಾರು ಹಣ ನೀಡುವಂತೆ ತಾಕೀತು ಮಾಡುತ್ತಾರೆ. ಇದನ್ನೆಲ್ಲಾ ಕಚೇರಿಯ ಮುಖ್ಯಸ್ಥರು ಹಾಗೂ ಕಚೇರಿ ಉಸ್ತುವಾರಿಯಲ್ಲಿರುವ ಶಿರಸ್ತೆÀ್ತದಾರರುಗಳು ಗಮನ ಹರಿಸಿ ಆಗಿಂದಾಗ್ಗೆ ವಿಷಯ ನಿರ್ವಾಹಕರು ಮತ್ತು ತಮ್ಮ ಅಧೀನ ಕಚೇರಿಗಳು ತಪಾಸಣೆ ನಡೆಸಿ ಕಡತಗಳ ಶ್ರೇಷ್ಟ ವಿಲೇವಾರಿಗೆ ಕ್ರಮವಹಿಸಿದಲ್ಲಿ ಆದಷ್ಟು ಮಟ್ಟಿಗೆ ಕಚೇರಿಯ ಆಡಳಿತದಲ್ಲಿ ಸುಧಾರಣೆಯನ್ನು ತರಬಹುದು. ಅದು ಬಿಟ್ಟು ಕಚೇರಿಯಲ್ಲಿ ಸಿಸಿ ಟಿವಿ ಅಳವಡಿಕೆ ಅಥವಾ ಬ್ಯಾನರ್‍ಗಳ ಅಳವಡಿಕೆಯಿಂದ ಯಾವುದೇ ಆಡಳಿತ ಸುಧಾರಣೆ ಆಗುವುದಿಲ್ಲ.

ಕಚೇರಿ ವ್ಯವಹಾರಗಳಿಗೆ ಹಲವಾರು ನಿವೃತ್ತರು ಮತ್ತು ಹಿರಿಯ ನಾಗರಿಕರು ಕಚೇರಿಗೆ ಬರುತ್ತಿರುತ್ತಾರೆ. ಆದರೆ ಭ್ರಷ್ಟ ಸಿಬ್ಬಂದಿಗಳಿಗೆ ಇದಾವುದು ಗಣನೆಗೆ ಬರುವುದಿಲ್ಲ. ಭೂದಾಖಲೆಗಳ ಬಗ್ಗೆ ಸರಕಾರವು ಪ್ರಸ್ತುತ ಆರ್‍ಟಿಸಿ ಯನ್ನು ಚಾಲನೆಗೆ ತಂದಿದ್ದು ಇದರಲ್ಲಿ ಹಲವು ಲೋಪಗಳ ಬಗ್ಗೆ ಹಲವಾರು ಹಿರಿಯ ನಾಗರಿಕರು ಕಚೇರಿಗೆ ಬರುತ್ತಿರುತ್ತಾರೆ. ಇವರಿಗೆ ತಮ್ಮ ದಾಖಲೆಗಳಲ್ಲಿನ ತಪ್ಪಿನ ಬಗ್ಗೆ ಅರಿವು ಇರುವುದಿಲ್ಲ. ಆದರೆ ಕಚೇರಿ ಸಿಬ್ಬಂದಿಗಳು ಹಿರಿಯ ನಾಗರಿಕರನ್ನು ಸಹಾ ಸಾಮಾನ್ಯರಂತೆ ಪರಿಗಣಿಸಿ ಇದು ಸರಿಯಿಲ್ಲ, ಇದು ಆಗುವುದಿಲ್ಲ ಎಂಬ ಒಂದೇ ಉತ್ತರದಲ್ಲಿ ಇವರನ್ನು ಹಿಂದಕ್ಕೆ ಕಳುಹಿಸುತ್ತಾರೆ. ಒಟ್ಟಿನಲ್ಲಿ ಸಿಬ್ಬಂದಿಗಳು ಈ ವಿಚಾರದಲ್ಲಿ ಪೂರ್ಣ ತಿಳಿದಿರುವದಿಲ್ಲ. ಇದಕ್ಕೆಲ್ಲ ಕಾರಣ ಇವರಿಗೆ ಸೂಕ್ತ ತರಬೇತಿ ಹಾಗೂ ಮಾಗದರ್ಶನ ಇಲ್ಲದಿರುವುದು. ಆದರೆ ಭ್ರಷ್ಟಚಾರದಲ್ಲಿ ಎತ್ತಿದ ಕೈಯಾಗಿರುತ್ತಾರೆ. ಕಂದಾಯ ಇಲಾಖೆಯಲ್ಲಿ ಹೋಬಳಿ ಮಟ್ಟದಲ್ಲಿ ಕೆಲಸ ನಿರ್ವಹಿಸಲು ಕಂದಾಯ ಪರಿವೀಕ್ಷಕರು ಮತ್ತು ಗ್ರಾಮ ಮಟ್ಟದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದು, ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ-ತಮ್ಮ ಕ್ಷೇತ್ರಗಳಲ್ಲಿ ವಾಸವಿದ್ದು, ಪ್ರತಿದಿನ ಗ್ರಾಮಸ್ಥರ ಸಂಪರ್ಕದಲ್ಲಿರಬೇಕೆಂದು ನಿಯಮವಿರುತ್ತದೆ. ಆದರೆ ಕೆಲವು ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ಹೋಬಳಿ ಕ್ಷೇತ್ರವನ್ನು ಬಿಟ್ಟು ಹೊರ ತಾಲೂಕು, ಜಿಲ್ಲೆಗಳಿಂದ ಕಚೇರಿಗೆ ಬರುತ್ತಾರೆ. ಇನ್ನು ಇವರು ತಮ್ಮ ಅಧೀನದ ಗ್ರಾಮ ಸಹಾಯಕರನ್ನು ಅವಲಂಬಿಸಿ ಕೆಲಸ ನಿರ್ವಹಿಸುತ್ತಾರೆ. ಗ್ರಾಮಸ್ಥರು ತಮ್ಮ ಕೆಲಸ ಕಾರ್ಯಗಳಿಗೆ ಚಾತಕ ಪಕ್ಷಿಯಂತೆ ಗ್ರಾಮ ಲೆಕ್ಕಾಧಿಕಾರಿಗಳ ಬರುವಿಕೆಯನ್ನು ಕಾದು-ಕಾದು ಸುಸ್ತಾಗಿ ನಂತರ ಲಂಚ ನೀಡಿ ಗ್ರಾಮ ಸಹಾಯಕರ ಮುಖಾಂತರವೋ, ಬ್ರೋಕರುಗಳ ಮುಖಾಂತರವೋ ಕೆಲಸ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಸುಂಟಿಕೊಪ್ಪ ಹೋಬಳಿಯ ಗ್ರಾಮಲೆಕ್ಕಾಧಿಕಾರಿಯೊಬ್ಬರು ಪ್ರತಿದಿನ ಮೈಸೂರಿನಿಂದ ಸುಂಟಿಕೊಪ್ಪಕ್ಕೆ ಬಂದು ಸಾಯಂಕಾಲ ಪುನಃ ಮೈಸೂರಿಗೆ ಹಿಂತಿರುಗುತ್ತಾರೆ, ಹೀಗಿರುವಲ್ಲಿ ಇವರಿಂದ ಎಷ್ಟರ ಮಟ್ಟಿಗೆ ಗ್ರಾಮಸ್ಥರು ಸಕಾಲದಲ್ಲಿ ಸೇವೆಯನ್ನು ಪಡೆಯಬಹುದು ಎಂಬದನ್ನು ಮೇಲಧಿಕಾರಿಗಳೇ ಗಮನಿಸಿ ಕ್ರಮವಹಿಸಬೇಕಾಗಿರುತ್ತದೆ.

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ತಾಲೂಕು ಕಚೇರಿ ಮತ್ತು ಕಂದಾಯ ಪರಿವೀಕ್ಷಕರ ಕಚೇರಿ ಹೊರತು ಪಡಿಸಿ ಸರ್ವೇ ಇಲಾಖೆಯಿರುತ್ತದೆ. ಇಲ್ಲಿ ಲಂಚ ಇಲ್ಲದೆ ಕೆಲಸ ನಡೆಯುವುದೇ ಇಲ್ಲ. ಪ್ರತಿ ಹಂತದಲ್ಲಿ ಪ್ರತಿಯೊಬ್ಬ ಸಿಬ್ಬಂದಿಗೂ ಅಂದರೆ “ಡಿ” ದರ್ಜೆ ನೌಕರನಿಂದ ಹಿಡಿದು ಉನ್ನತ ಮಟ್ಟದ ಅಧಿಕಾರಿಗಳವರೆಗೂ ಲಂಚ ನೀಡದೆ ಕೆಲಸ ಆಗುವದಿಲ್ಲ. ಕಚೇರಿಯಲ್ಲಿ ಕಡತವನ್ನು ರವಾನಿಸುವ ಬಗ್ಗೆಯೂ ಸರ್ವೇ ಇಲಾಖೆಯ ಸಿಬ್ಬಂದಿಗಳಿಗೆ ಕೇಳಿದಷ್ಟು ಹಣ ನೀಡಬೇಕಾಗುತ್ತದೆ. ಸರ್ವೇ ಮಾಡಲು ಸರ್ವೇ ಮಾಡಿದ ನಂತರ ಕಂದಾಯ ನಿಗದಿ ಪಡಿಸಿ ಎಕರೆಗೆ ಇಂತಿಷ್ಟೇ ಹಣ ನೀಡಬೇಕೆಂಬ ಬೇಡಿಕೆ ಇಡುತ್ತಾರೆ. ಹಣ ನೀಡದಿದ್ದಲ್ಲಿ ಏನಾದರೂ ನೆಪ ಹೇಳಿ ಕಡತವನ್ನು ತಡೆ ಹಿಡಿಯುತ್ತಾರೆ. ಅಥವಾ ಮುಕ್ತಾಯ ಗೊಳಿಸಲು ಶಿಫಾರಸ್ಸು ಮಾಡುತ್ತಾರೆ. ಕೆಲವೊಮ್ಮೆ ಕಚೇರಿಯ ಕಡತಗಳ ಬಗ್ಗೆ ಕಚೇರಿಯ ಮುಖ್ಯಸ್ಥರ ಸಹಿ ಪಡೆಯಲು ಮುಖ್ಯಸ್ಥರ ಹೆಸರು ಹೇಳಿಕೊಂಡು ಸಿಬ್ಬಂದಿಗಳು ಲಂಚ ಪಡೆಯುತ್ತಾರೆ. ಇದರಿಂದ ಜನರಿಗೆ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗದೆ ಬ್ರೋಕರುಗಳ ಮುಖಾಂತರ ಅಪಾರ ಹಣ ತೆತ್ತು ಕೆಲಸ ಮಾಡಿಸಿಕೊಳ್ಳಬೇಕಾಗುತ್ತದೆ. ಇದಕ್ಕೆಲ್ಲ ಕಚೇರಿಯ ಸಿಬ್ಬಂದಿಗಳ, ಕಚೇರಿ ಮುಖ್ಯಸ್ಥರ ಹಾಗೂ ಹಿರಿಯ ಅಧಿಕಾರಿಗಳ ಶಿಸ್ತು ಮತ್ತು ಪ್ರಾಮಾಣಿಕತೆಯ ಕೊರತೆಯೇ ಕಾರಣ ಎಂದು ಹೇಳಬಹುದು. ಕಚೇರಿಯ ಸಿಬ್ಬಂದಿ ಮತ್ತು ಅಧಿಕಾರಿಯ ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ತೋರಿಸದಿದ್ದಲ್ಲ್ಲಿ ಸರಕಾರವು ಎಷ್ಟೇ ಯೋಜನೆಗಳನ್ನು ಅಥವಾ ರೈತರಿಗೆ ಸವಲತ್ತುಗಳನ್ನು ಘೋಷಿಸಿದರೂ ಇದು ನೀರಿನಲ್ಲಿ ಹೋಮ ಹಾಕಿದಂತೆ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿ ಅಧೀನ ಕಚೇರಿ ಸಿಬ್ಬಂದಿಗಳ ಮೇಲೆ ನಿಗಾ ಇರಿಸಿ ಆಗಿಂದಾಗೆ ಕಚೇರಿ ತಪಾಸಣೆಯನ್ನು ನಡೆಸುವದಲ್ಲದೆ ಅನಿರೀಕ್ಷಿತ ಕಚೇರಿ ಭೇಟಿಯ ಮುಖಾಂತರವು ಸಿಬ್ಬಂದಿಗಳ ದಕ್ಷತೆಯನ್ನು ಹೆಚ್ಚಿಸಬಹುದು. ಅದು ಬಿಟ್ಟು ಮೇಲೆ ಹೇಳಿದಂತೆ ಕಚೇರಿಯಲ್ಲಿ ಸಿ.ಸಿ. ಟಿವಿ ಅಳವಡಿಕೆ ಅಥವಾ ಬ್ಯಾನರ್ ಅಳವಡಿಕೆಗಳಿಂದ ಕಚೇರಿಯ ಆಡಳಿತದಲ್ಲಿ ಯಾವದೇ ಸುಧಾರಣೆಗಳನ್ನು ತರಲು ಸಾಧ್ಯವಿರುವದಿಲ್ಲ.

?ವೈ. ಪಿ. ತಿಮ್ಮಯ್ಯ, ನಿವೃತ್ತ ಉಪತಹಶೀಲ್ದಾರರು

ಕೆದಕಲ್.