*ಸಿದ್ದಾಪುರ, ಡಿ. 21: ಗ್ರಾಮ ಪಂಚಾಯಿತಿಯ 2017ನೇ ಸಾಲಿನ ಮಕ್ಕಳ ವಿಶೇಷ ಗ್ರಾಮ ಸಭೆ ಸೆಂಟಿನರಿ ಸಭಾಂಗಣದಲ್ಲಿ ನಡೆಯಿತು.

ಕಳೆದ ಗ್ರಾಮ ಸಭೆಯಲ್ಲಿ. ವಿದ್ಯಾರ್ಥಿಗಳು ಕುಡಿಯುವ ನೀರು, ರಸ್ತೆ, ಶುಚಿತ್ವ, ಬೀದಿ ದೀಪ, ಚರಂಡಿ ದುರಸ್ತಿ, ಇಂಟರ್ ಲಾಕ್, ವಾಹನ ವೇಗ ನಿಯಂತ್ರಣಕ್ಕೆ ಬ್ಯಾರಿಕೆಡ್ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿದ್ದ ಹಿನ್ನೆಲೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಬಹುತೇಕ ಕೆಲಸ ಮಾಡಿರುವದಕ್ಕೆ ಗ್ರಾಮ ಪಂಚಾಯಿತಿಗೆ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದರು. ಇದರೊಂದಿಗೆ ಬೀದಿ ನಾಯಿ ಹಾವಳಿ, ಕಾಡಾನೆ ಸಮಸ್ಯೆ, ಮೊಬೈಲ್ ಟವರ್ ತೆರುವು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ. ಮಣಿ ಮಾತನಾಡಿ, ಈ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಯಾವದೇ ಸೌಲಭ್ಯಗಳಿಲ್ಲದೆ ಶಿಕ್ಷಣ ಪಡೆದವರು ಪ್ರತಿಭಾನ್ವಿತರಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ.

ಈಗ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ರೂಪಿಸಲು ಸರಕಾರ ವಿವಿಧ ಕಾರ್ಯಕ್ರಮಗಳ ಮೂಲಕ ಹೆಚ್ಚಿನ ಸೌಲಭ್ಯ ನೀಡುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಮುಂದೆ ಬರಬೇಕೆಂದು ಹೇಳಿದರು.

ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸಿರಾಜ್ ಅಹಮ್ಮದ್ ಮಾತನಾಡಿ, ಬಾಲ ಕಾರ್ಮಿಕರಾಗಿ ಮಕ್ಕಳನ್ನು ದುಡಿಸುವದು ಅಕ್ಷಮ್ಯ ಅಪರಾಧ. ಯಾರಾದರೂ ತಮ್ಮ ಪೋಷಕರ ಒತ್ತಾಸೆಯ ಮೇರೆಗೆ ದುಡಿಯುವ ಪರಿಸ್ಥಿತಿ ಇದ್ದಲ್ಲಿ ಕೂಡಲೇ ಇಲಾಖೆಗೆ ತಿಳಿಸಬೇಕೆಂದರು. ಲೈಂಗಿಕ ದೌರ್ಜನ್ಯ, ಅತ್ಯಾಚಾರ ಇನ್ನಿತರ ಮಾನಸಿಕ ಹಾಗೂ ದೈಹಿಕ ತೊಂದರೆಗಳು ಇದ್ದಲ್ಲಿ ಇಲಾಖೆಯ ಸಹಾಯವಾಣಿ 1098ಕ್ಕೆ ಕರೆಮಾಡಿ ಪರಿಹಾರ ಕಂಡುಕೊಳ್ಳ ಬಹುದೆಂದರು.

ಜಿ.ಎಂ.ಪಿ. ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮಾ ಕುಮಾರಿ ಮಾತನಾಡಿ, ಯಾವದೇ ಮಗು ಕೂಡಾ ಮಾನಸಿಕ ಮತ್ತು ದೈಹಿಕ ಹಕ್ಕುಗಳಿಂದ ವಂಚಿತ ರಾಗಬಾರದು. ತಮ್ಮ ಹಕ್ಕುಗಳಿಂದ ಕೆಲವೊಂದು ಕರ್ತವ್ಯವನ್ನು ಮಕ್ಕಳು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಡಾ. ಹೀನಾ ಮಾತನಾಡಿ, ವಿದ್ಯಾರ್ಥಿಗಳು ಪೌಷ್ಟಿಕ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯ ವಂತರಾಗಿ ಮುಂದೆ ಬರಬೇಕೆಂದು ಹೇಳಿದರು.

ಕರಡಿಗೋಡು ಶಾಲೆ, ಗುಹ್ಯಶಾಲೆ, ಸಿದ್ದಾಪುರದ ಇಕ್ರಾ ಶಾಲೆ, ಶ್ರೀಕೃಷ್ಣ ಶಾಲೆ, ಜಿ.ಎಂ.ಪಿ. ಶಾಲೆ, ಮಲಯಾಳಂ ಶಾಲೆಯ ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯರಾದ ಜಾಫರ್, ಉಸೈನ್, ಟಿ.ಹೆಚ್. ಮಂಜುನಾಥ್, ಶಿವು ಕುಮಾರ್, ಪ್ರತಿಮಾ, ಪ್ರೇಮಾ, ಪೂವಮ್ಮ, ದೇವಜಾನು, ಕಾರ್ಯದರ್ಶಿ ಧರಣಿ, ಗುರುಶ್ರೀ ಸೇರಿದಂತೆ ಮ್ತತಿತರರು ಉಪಸ್ಥಿತರಿದ್ದರು.