ಶನಿವಾರಸಂತೆ, ಡಿ. 21: ಭಾಷೆಯ ಅಭಿವೃದ್ಧಿ ಪ್ರತಿ ಭಾಷಿಗನ ಜವಾಬ್ದಾರಿಯಾಗಿದ್ದು, ಸದಸ್ಯರೆಲ್ಲರೂ ಹಳ್ಳಿ ಹಳ್ಳಿಗಳಿಗೆ ಹೋಗಿ ತುಳು ಭಾಷಿಕರನ್ನು ಸಂಘಟಿಸಬೇಕು ಎಂದು ತುಳು ಜಾನಪದ ಒಕ್ಕೂಟ ತಾಲೂಕು ಘಟಕದ ಅಧ್ಯಕ್ಷ ದಿನೇಶ್ ಕರೆಯಿತ್ತರು.
ತ್ಯಾಗರಾಜ ಕಾಲೋನಿಯ ಸಮುದಾಯ ಭವನದಲ್ಲಿ ತುಳು ಜಾನಪದ ಒಕ್ಕೂಟ ಹೋಬಳಿ ಘಟಕ ರಚನಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉಪಾಧ್ಯಕ್ಷೆ ಇಂದಿರಾ ಪೊನ್ನಪ್ಪ ಮಾತನಾಡಿ, ಯಾರು ಯಾವದೇ ಸಮಸ್ಯೆಯಲ್ಲಿ ಸಿಲುಕಿದರೂ ತುಳು ಭಾಷಿಕರು ಜಾತಿ ಬದಿಗೊತ್ತಿ ಪರಸ್ಪರ ಸಹಕಾರ ನೀಡಬೇಕು ಎಂದರು.
ಒಕ್ಕೂಟದ ಸದಸ್ಯ ಎಸ್.ಎನ್. ರಘು ಮಾತನಾಡಿ, ಹೋಬಳಿಯ ತುಳು ಭಾಷಿಕರನ್ನು ಒಂದುಗೋಡಿಸುವ ಉದ್ದೇಶದಿಂದ ತುಳು ಜಾನಪದ ಒಕ್ಕೂಟ ಘಟಕ ರಚನೆಯ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ ಎಂದರು.
ಒಕ್ಕೂಟದ ತಾಲೂಕು ಘಟಕದ ಕಾರ್ಯದರ್ಶಿ ಪ್ರಶಾಂತ್, ಸದಸ್ಯರಾದ ಚಂದ್ರಿಕಾ, ಯೋಗೇಶ್, ಈ.ಎನ್. ದಿನೇಶ್, ವಿ.ಕೆ. ಕುಮಾರ್, ರತ್ನಾಕರ್ ಶೆಟ್ಟಿ, ಎಸ್.ಪಿ. ಭಾಗ್ಯ ಮಾತನಾಡಿದರು. ವಿವಿಧ ಸಮುದಾಯದ ಪ್ರಮುಖರಾದ ಗಣೇಶ್ ಶೆಟ್ಟಿ, ಜಿ.ಈ. ಈಶ್ವರ್, ರಂಜನ್, ಶೇಷಪ್ಪ, ಗಣೇಶ್, ಉಷಾ, ಹೇಮಾವತಿ, ದಿನೇಶ್, ಪಾಂಡು, ಹರೀಶ್ ಉಪಸ್ಥಿತರಿದ್ದರು.