ಮಡಿಕೇರಿ, ಡಿ. 21: ಮಡಿಕೇರಿ ನಗರದ ಮಯೂರ ವ್ಯಾಲಿ ಹೊಟೇಲ್ ಸಭಾಂಗಣದಲ್ಲಿ ಕೊಡಗು ಜಿಲ್ಲೆಯ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಸಂಸ್ಥಾಪಕರ ಸಭೆಯನ್ನು ಕೊಡಗು ಜಿಲ್ಲೆಯ ಎಲ್ಲಾ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಝರು ಗಣಪತಿ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸಭೆಯಲ್ಲಿ ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕೆಲವು ಸುತ್ತೋಲೆ ಗಳಿಂದ ಖಾಸಗಿ ಶಾಲೆಗಳಿಗೆ ಆಗುತ್ತಿರುವ ಅನಾನುಕೂಲದ ಬಗ್ಗೆ ಚರ್ಚಿಸಲಾಯಿತು. ಖಾಸಗಿ ಶಾಲೆಗಳ ನಿಯಮಾನುಸಾರ, ಖಾಸಗಿ ಶಾಲೆಗಳ ಒಕ್ಕೂಟದ ವತಿಯಿಂದ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಹಾಗೂ ಕರ್ನಾಟಕ ರಾಜ್ಯ ಖಾಸಗಿ ಶಾಲೆಗಳ ಒಕ್ಕೂಟದ ಜೊತೆ ನಿಕಟಸಂಪರ್ಕ ಇಟ್ಟುಕೊಂಡು ಸರ್ಕಾರದೊಂದಿಗೆ ರಾಜ್ಯಮಟ್ಟದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವಂತೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಯಂ.ಓ ದಾಮೋದರ್, ಒಕ್ಕೂಟದ ಕಾನೂನು ಸಲಹೆಗಾರ ಎಂ.ಎಸ್. ಪೂವಯ್ಯ, ಕೊಡ್ಲಿಪೇಟೆ ಎಸ್.ಯನ್.ಎಸ್. ವಿದ್ಯಾಸಂಸ್ಥೆಯ ಶ್ರೀ ಮಹಂತ ಸ್ವಾಮೀಜಿ ಜಿಲ್ಲೆಯ ಎಲ್ಲಾ ಖಾಸಗಿ ವಿದ್ಯಾಸಂಸ್ಥೆಗಳ ಸಂಸ್ಥಾಪಕರು ಹಾಜರಿದ್ದರು.
ಸಭೆಯ ನಿರೂಪಣೆ ಹಾಗೂ ಸ್ವಾಗತವನ್ನು ಜಿಲ್ಲಾ ಒಕ್ಕೂಟದ ಕಾರ್ಯದರ್ಶಿ ಕೋಟ್ರಂಗಡ ತಿಮ್ಮಯ್ಯ ನೆರವೇರಿಸಿದರು. ಸುಪ್ರಜ ಗುರುಕುಲ ಶಾಲೆಯ ಸುಜಲಾದೇವಿ ವಂದಿಸಿದರು.