ಮಡಿಕೇರಿ, ಡಿ. 21: ‘ಜನರನ್ನು ಬರುವಿಕೆಗಾಗಿ ಬೇರೆಯವರು ಕಾಯುವದರಿಂದ ತಾಪವಾದರೆ, ಸಂತರ ಬರುವಿಕೆಗಾಗಿ ಕಾಯುವದು ತಪಸ್ಸು ಆಗಲಿದೆ’ ಎಂದು ಆದಿ ಚುಂಚನಗಿರಿ ಕ್ಷೇತ್ರದ ಜಗದ್ಗುರು ಪೂಜ್ಯ ಡಾ. ನಿರ್ಮಲಾನಂದ ಮಹಾಸ್ವಾಮೀಜಿ ಮಾತು ಆರಂಭಿಸಿದಾಗ ಜನತೆಯಿಂದ ಹರ್ಷೋದ್ಘಾರದೊಡನೆ ಭಾರೀ ಕರತಾಡನ ಕೇಳಿ ಬಂತು. ದಾನಿಗಳ ಸಹಯೋಗದಿಂದ ಐವತ್ತು ವರ್ಷ ಹಿಂದೆ ಕಟ್ಟಿ ಬೆಳೆಸಿದ ವಿದ್ಯಾ ದೇಗುಲ ಸಿದ್ದಾಪುರ ಪ್ರೌಢಶಾಲೆಯ ಸುವರ್ಣ ಸಂಭ್ರಮದ ನಡುವೆ ಇಂದು ಆದಿ ಚುಂಚನಗಿರಿ ಶಿಕ್ಷಣ ಸಮೂಹ ಸಂಸ್ಥೆಗಳೊಂದಿಗೆ ಈ ಜ್ಞಾನ ಮಂದಿರ ಸೇರ್ಪಡೆಗೊಂಡ ಅಪೂರ್ವ ಕ್ಷಣದ ಸನ್ನಿವೇಶ ಇದಾಗಿತ್ತು.

ಏಳು ಕುದುರೆಗಳನ್ನು ಒಳಗೊಂಡಂತೆ ರಜತರಥವೇರಿ ಬರುವಂತೆ ಆಕರ್ಷಕ ತೆರೆದ ಮಂಟಪದಲ್ಲಿ ಸಿದ್ದಾಪುರ ಪಟ್ಟಣದ ಪುರಾತನ ರಾಮಮಂದಿರದಿಂದ ವಿದ್ಯಾದೇಗುಲ ಆವರಣ ತನಕ ಸಹಸ್ರಾರು ವಿದ್ಯಾರ್ಥಿ ಸಮೂಹ ನಾಡಿನ ಗಣ್ಯರೊಂದಿಗೆ ಸಂತರನ್ನು ಮೆರವಣಿಗೆಯಲ್ಲಿ ಕರೆತಂದ ಅಪೂರ್ವ ಸಂದರ್ಭವಿದು.

ಪುರುಷ ಹಾಗೂ ಮಹಿಳಾ ತಂಡಗಳ ಚಂಡೆವಾದ್ಯದೊಂದಿಗೆ ಸಂತರು, ರಾಮಮಂದಿರದಲ್ಲಿ ವಿಘ್ನವಿನಾಯಕ ಸಹಿತ ಪರಿವಾರ ದೇವತೆಗಳಿಗೆ ಪೂಜೆ ಸಲ್ಲಿಸಿ ವಿದ್ಯಾದೇಗುಲದೆಡೆಗೆ ಸಾಗಿದರು.

ಮುಂಚೂಣಿಯಲ್ಲಿ ಕಲಶ ಹೊತ್ತ ವನಿತೆಯರು ಹಾಗೂ ಭವಿಷ್ಯದ ಪ್ರಜೆಗಳಾದ ಸಾವಿರಾರು ವಿದ್ಯಾರ್ಥಿಗಳು ಸಂತಗಣವನ್ನು ಸ್ವಾಗತಿಸುತ್ತಾ ಪುಷ್ಪವೃಷ್ಟಿಯೊಂದಿಗೆ ಮೆರವಣಿಗೆಯಲ್ಲಿ ಶಾಲಾ ಆವರಣಕ್ಕೆ ಕರೆದೊಯ್ದು. ಸಿದ್ದಾಪುರ ಪಟ್ಟಣದುದ್ದಕ್ಕೂ ಭೇದ ಭಾವ ಮರೆತು ರಸ್ತೆಯ ಇಕ್ಕಡೆಗಳಲ್ಲಿ ಜನತೆ ಕೈ ಮುಗಿಯುತ್ತಾ ಪೂಜ್ಯ ಸಂತರವನ್ನು ಫಲ, ಪುಷ್ಪದೊಂದಿಗೆ ಗೌರವಿಸುತ್ತಿದ್ದ ದೃಶ್ಯ ಎದುರಾಯಿತು.

ಕ್ಷೇತ್ರ ದೇವನಾದ ಕಾಲ ಭೈರವನಿಗೆ ವಿದ್ಯಾಲಯದಲ್ಲಿ ವಿಶೇಷ ಪೂಜೆಯೊಂದಿಗೆ ಲಿಂಗೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಯವರ 73ನೇ ವರ್ಧಂತಿ ಉತ್ಸವ ಹಾಗೂ ವಿದ್ಯಾ ಸಂಸ್ಥೆಯ ಸುವರ್ಣ ಮಹೋತ್ಸವ ಸಲುವಾಗಿ ಹೋಮ ಹವನ ನೆರವೇರಿತು.

ಜಿ.ಪಂ. ಮಾಜಿ ಅಧ್ಯಕ್ಷೆ ದೀರ್ಘಕೇಶಿ ಶಿವಣ್ಣ, ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ವಿದ್ಯಾಸಂಸ್ಥೆ ಪ್ರಮುಖರಾದ ಮಂಡೇಪಂಡ ರಮೇಶ, ಪಟ್ಟಡ ಕುಶಾಲಪ್ಪ, ಕುಕ್ಕುನೂರು ಪ್ರಭಾಕರ್ ಸೇರಿದಂತೆ ತಾ.ಪಂ. ಮಾಜಿ ಅಧ್ಯಕ್ಷ ವಿ.ಕೆ. ಲೋಕೇಶ್ ಸಹಿತ ಸಿದ್ದಾಪುರ ಸುತ್ತಮುತ್ತಲಿನ ಅನೇಕ ಪ್ರಮುಖರು ಸಂತರ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಆದಿ ಚುಂಚನಗಿರಿ ಮೈಸೂರು ಶಾಖೆಯ ಸೋಮೇಶ್ವರನಾಥ ಸ್ವಾಮಿಗೆ ಶೃಂಗೇರಿ ಶಾಖೆಯ ಗುಣಾನಾಥ ಸ್ವಾಮೀಜಿ, ಬಸರಿಘಟ್ಟದ ಚಂದ್ರಶೇಖರ ಸ್ವಾಮೀಜಿ, ಚಿಕ್ಕಬಳ್ಳಾಪುರದ ಮಂಗಳನಾಥ ಸ್ವಾಮೀಜಿ, ಬೆಂಗಳೂರಿನ ಅನ್ನದಾನೇಶ್ವರ ಸ್ವಾಮೀಜಿ, ಕೆ.ಆರ್. ನಗರದ ಶಿವಾನಂದ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ, ಕನಕಪುರದ ವಿದ್ಯಾಧರನಾಥ ಸ್ವಾಮೀಜಿ, ಹುಳಿಮಾವು ಶ್ರೀಶೈಲ ಸ್ವಾಮೀಜಿ ಸಹಿತ ಡಾ. ನಿರ್ಮಲಾನಂದ ಮಹಾಸ್ವಾಮೀಜಿ ಅವರೊಡಗೂಡಿ ಸಂತ ಸಮೂಹ ದರ್ಶನದೊಂದಿಗೆ ಸಜ್ಜನರನ್ನು ಕರಕಮಲಗಳಿಂದ ಹರಸುತ್ತಾ ಸಾಗಿದ್ದು, ಅಪೂರ್ವವೆನಿಸಿತು.

ಸಿದ್ದಾಪುರದ ವಿವಿಧ ಶಾಲಾ ಮಕ್ಕಳಲ್ಲದೆ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆಗಳಾದ ಪಿರಿಯಾಪಟ್ಟಣ, ಹುಣಸೂರು, ಹೆಗ್ಗಡದೇವನ ಕೋಟೆಯ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಣ ವೃಂದ ಮೆರವಣಿಗೆಗೆ ಸೊಬಗು ತುಂಬಿದ್ದರು.