ಸೋಮವಾರಪೇಟೆ, ಡಿ. 21: ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆಯಲ್ಲಿ ಅಕ್ರಮ ನಡೆದಿದೆ ಎಂಬ ಕೆಲವರ ಆರೋಪ ಹುರುಳಿಲ್ಲದ್ದು ಎಂದು ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಹೇಳಿದರು.

ಇಲ್ಲಿನ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೀಪದ ಮಾದಾಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಕೆಲ ಸದಸ್ಯರು ಸೇರಿಕೊಂಡು ವಸತಿ ಯೋಜನೆಯಲ್ಲಿ ಅವ್ಯವಹಾರ ಎಂದು ಆಧಾರ ರಹಿತವಾಗಿ ಆರೋಪ ಮಾಡುತ್ತಿದ್ದು, ಹೀಗೆ ಮುಂದುವರಿದರೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗುವದು ಎಂದು ಎಚ್ಚರಿಸಿದರು.

ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ, ಸದಸ್ಯರಾದ ಪ್ರಸನ್ನ, ಸೋಮಪ್ಪ ಎಂಬವರು, ತಾ.ಪಂ. ಉಪಾಧ್ಯಕ್ಷನಾದ ನನ್ನ ಮೇಲೆ ಶಾಸಕರು ಹಾಗೂ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೇಳಿದರು.

ಆರೋಪ ಮಾಡಿದವರು, ರಾಜೀವ್‍ಗಾಂಧಿ ಗ್ರಾಮೀಣ ವಸತಿ ನಿಗಮದ ನಿಯಮವನ್ನು ಓದಿಕೊಳ್ಳಬೇಕು. ಶೇ. 60 ರಷ್ಟು ಮನೆಗಳನ್ನು ಗ್ರಾಮ ಪಂಚಾಯಿತಿ ಗ್ರಾಮಸಭೆಯ ಮೂಲಕ ಆಯ್ಕೆ ಮಾಡಿದರೆ, ಶೇ. 40 ರಷ್ಟು ಜಾಗೃತಿ ಸಮಿತಿಯ ಅಧ್ಯಕ್ಷರಾದ ಶಾಸಕರು ವಿತರಣೆ ಮಾಡಬೇಕು. ಮಾದಾಪುರ ಪಂಚಾಯಿತಿಯ ವ್ಯಾಪ್ತಿಯಲ್ಲಿ 10 ಹಾಗು ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ 10 ಮನೆಗಳು ಶಾಸಕರು ವಿತರಣೆ ಮಾಡಿದ್ದಾರೆ. ನಾನು ಶಿಫಾರಸ್ಸನ್ನು ಮಾತ್ರ ಮಾಡಿದ್ದೇನೆ ಎಂದು ಹೇಳಿದರು.

ಮಾದಾಪುರ ಗ್ರಾಮ ಪಂಚಾಯಿತಿಯ ಕೆಲ ಸಿಬ್ಬಂದಿಗಳು ವಸತಿ ಯೋಜನೆಯ ಕೆಲ ಫಲಾನುಭವಿಗಳಿಂದ ಅಕ್ರಮವಾಗಿ ಹಣ ಪಡೆದು ಕೊಂಡಿದ್ದರು.

ನನಗೆ ವಿಷಯ ತಿಳಿದು, ಸಿಬ್ಬಂದಿಗಳಿಗೆ ಎಚ್ಚರಿಕೆ ಕೊಟ್ಟು ಹಣವನ್ನು ಫಲಾನುಭವಿಗಳಿಗೆ ವಾಪಸ್ಸು ಕೊಡಿಸಿದ್ದೇನೆ. ನಾನು ಯಾವದೇ ಪಿ.ಡಿ.ಓ.ಗಳಿಗೆ ಕಿರುಕುಳ ನೀಡಿ, ವರ್ಗಾವಣೆ ಮಾಡಿಸಿಲ್ಲ. ಆದರೆ ಕರ್ತವ್ಯಲೋಪ ಎಸಗುವ ಅಧಿಕಾರಿಗಳನ್ನು ಸುಮ್ಮನೆ ಬಿಡುವದಿಲ್ಲ ಎಂದು ಹೇಳಿದರು.

ಮಾದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎರಡೆರಡು ಬಾರಿ ವಸತಿ ಯೋಜನೆಯ ಮನೆಗಳನ್ನು ವಿತರಣೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಅಧಾರ ನೀಡಿದರೆ ಕ್ರಮ ಕೈಗೊಳ್ಳಲಾಗುವದು. ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ಸಂದರ್ಭ, ಸ್ವಜನಪಕ್ಷಪಾತ ಮಾಡಿಲ್ಲ. ಹಾಗೇನಾದರೂ ಮಾಡಿದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದ ಅಭಿಮನ್ಯು ಕುಮಾರ್ ನನ್ನ ವಿರುದ್ಧ ಆರೋಪ ಮಾಡಿರುವ ಮಾದಾಪುರ ಗ್ರಾಪಂ ಸದಸ್ಯ ಪ್ರಸನ್ನ ಅವರ ಕುಟುಂಬದ ಸದಸ್ಯರಾದ ಸವಿತಾ ಜೋಯಪ್ಪ ಫಲಾನುಭವಿ ಯಾಗಿದ್ದಾರೆ. ಯಾರು ಸ್ವಜನ ಪಕ್ಷಪಾತಿಗಳು ಎಂದು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಗರ್ವಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶುಭಾಷ್, ಉಪಾಧ್ಯಕ್ಷ ಪಳಂಗಪ್ಪ, ವಸತಿ ಯೋಜನೆಯ ಫಲಾನುಭವಿಗಳಾದ ಶಿವಪ್ಪ, ಶ್ರೀಧರ್, ಸತ್ಯ, ಶೋಭ ಉಪಸ್ಥಿತರಿದ್ದರು.