ಮಡಿಕೇರಿ, ಡಿ. 19: ಶಿಕ್ಷಕರು ತಮ್ಮ ಶಾಲೆಗಳಲ್ಲಿ ಇಕೋ-ಕ್ಲಬ್ ಮೂಲಕ ವಿವಿಧ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವದರೊಂದಿಗೆ ಶಾಲೆಯನ್ನು ಸ್ವಚ್ಛ ಶಾಲೆಯನ್ನಾಗಿ ರೂಪಿಸಬೇಕು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಪ್ರಬಾರ ಉಪ ಯೋಜನಾ ಸಮನ್ವಯಾಧಿಕಾರಿ ಮಹದೇವ್ ಕರೆ ನೀಡಿದರು.
ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ಮಡಿಕೇರಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕೊಡಗು ಜಿಲ್ಲಾ ಸಮಿತಿ ಸಂಯುಕ್ತ ಆಶ್ರಯದಲ್ಲಿ 2017-18 ನೇ ಸಾಲಿನ ‘ಪರಿಸರ ಮಿತ್ರ’ ಶಾಲಾ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸುವ ಕುರಿತಂತೆ ನಗರದ ಪದವಿಪೂರ್ವ ಕಾಲೇಜಿನಲ್ಲಿ ಮಡಿಕೇರಿ ತಾಲೂಕು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಇತ್ತೀಚೆಗೆ ಏರ್ಪಡಿಸಿದ್ದ ಪರಿಸರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪರಿಸರ ಮಿತ್ರ’ ಶಾಲಾ ಕಾರ್ಯಕ್ರಮದ ರೂಪುರೇಷೆಗಳ ಕುರಿತು ವಿವರಿಸಿದ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಜಿ.ಆರ್. ಗಣೇಶನ್, ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವದರೊಂದಿಗೆ ಶಾಲಾ ಪರಿಸರವನ್ನು ಉತ್ತಮಪಡಿಸುವ ದಿಸೆಯಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
ಜಿಲ್ಲೆಯಲ್ಲಿ ಅತ್ಯುತ್ತಮ ಪರಿಸರ ಹೊಂದಿರುವ ಏಕೈಕ ‘ಪರಿಸರ ಮಿತ್ರ’ ಶಾಲೆಗೆ ರೂ. 30 ಸಾವಿರ, 10 ಹಸಿರು ಶಾಲೆಗಳಿಗೆ ತಲಾ ರೂ. 5 ಸಾವಿರ ಹಾಗೂ 10 ಹಳದಿ ಶಾಲೆಗಳಿಗೆ ತಲಾ ರೂ. 4 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುವದು ಎಂದರು.
‘ಪರಿಸರ ಮಿತ್ರ’ ಶಾಲಾ ಕಾರ್ಯ ಕ್ರಮದ ಜಿಲ್ಲಾ ಸಂಯೋಜಕರೂ ಆದ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲಾ ಇಕೋ-ಕ್ಲಬ್‍ನ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ‘ಪರಿಸರ ಮಿತ್ರ’ ಕಾರ್ಯಕ್ರಮದ 6 ಘಟಕಗಳಾದ ಗಾಳಿ, ಮಣ್ಣು, ನೀರು, ಶಕ್ತಿ, ಆರೋಗ್ಯ ಮತ್ತು ನೈರ್ಮಲ್ಯ ಹಾಗೂ ಶಾಲಾ ಪರಿಸರ ಚಟುವಟಿಕೆಗಳನ್ನು ಶಾಲೆಯ ಇಕೋ-ಕ್ಲಬ್ ವತಿಯಿಂದ ಪರಿಸರಪೂರಕ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ವಿದ್ಯಾರ್ಥಿ ಹಾಗೂ ಸಮುದಾಯದಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಕೆ. ಪ್ರಭು ಮಾತನಾಡಿ, ಈ ಕಾರ್ಯಕ್ರಮ ಪರಿಸರ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಸ್ವಚ್ಛ ಶಾಲೆ -ಸ್ವಚ್ಛ ಪರಿಸರ ವನ್ನಾಗಿ ರೂಪಿಸಿಲು ಸಹಕಾರಿ ಯಾಗಿದೆ ಎಂದರು. ಕಾರ್ಯಕ್ರಮದ ತಾಲೂಕು ನೋಡೆಲ್ ಅಧಿಕಾರಿ ಚಂದ್ರಹಾಸ ಎಂ. ಗೌಡ, ಶಾಲೆಯಲ್ಲಿ ಪರಿಸರ, ಆರೋಗ್ಯ, ನೈರ್ಮಲ್ಯ ಹಾಗೂ ಸ್ವಚ್ಛತೆಗೆ ಕಾಳಜಿ ವಹಿಸುವ ಕುರಿತು ತಿಳಿಸಿದರು. ಬಿಆರ್‍ಪಿ ಕೆ.ಯು. ರಂಜಿತ್ ಪರಿಸರ ಮಿತ್ರ ಕಾರ್ಯಕ್ರಮದ ಪ್ರಶ್ನಾವಳಿಗಳ ಬಗ್ಗೆ ಮಾಹಿತಿ ನೀಡಿದರು. ಬಿಆರ್‍ಪಿ ಪುಟ್ಟರಂಗನಾಥ್ ಇದ್ದರು.