ಸೋಮವಾರಪೇಟೆ, ಡಿ. 19: ಕೊಡಗು ಜಿಲ್ಲಾ ವೀರಶೈವ ಮಹಾಸಭಾದ ವತಿಯಿಂದ ಜನವರಿ 21 ರಂದು ಜಿಲ್ಲಾಮಟ್ಟದ ವೀರಶೈವ ಕ್ರೀಡಾಕೂಟ, ಜ. 23 ರಂದು ಪ್ರತಿಭಾ ಪುರಸ್ಕಾರ ಹಾಗೂ ಧಾರ್ಮಿಕ ಸಮಾವೇಶ ನಡೆಸಲು ಮಹಾಸಭಾದ ಸಭೆಯಲ್ಲಿ ನಿರ್ಧರಿಸಲಾಯಿತು.
ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಸಭೆ ಅಧ್ಯಕ್ಷ ಡಿ.ಬಿ. ಧರ್ಮಪ್ಪ ಅಧ್ಯಕ್ಷತೆಯಲ್ಲಿ ತೊರೆನೂರಿನ ವಿರಕ್ತ ಮಠದ ಆವರಣದಲ್ಲಿ ನಡೆಯಿತು. 2018ರ ಜನವರಿ 21 ರಂದು ಶನಿವಾರಸಂತೆಯ ಶಾಲಾ ಮೈದಾನದಲ್ಲಿ ಜಿಲ್ಲಾಮಟ್ಟದ ವೀರಶೈವ ಕ್ರೀಡಾಕೂಟ ಆಯೋಜಿಸಲು ಹಾಗೂ ಜ. 23 ರಂದು ಶನಿವಾರಸಂತೆಯ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ವೀರಶೈವ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಧಾರ್ಮಿಕ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು.
2016-17ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 85 ಕ್ಕಿಂತಲೂ ಹೆಚ್ಚಿನ ಅಂಕಗಳಿಸಿದ ಕೊಡಗು ಜಿಲ್ಲೆಯ ವೀರಶೈವ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ನಕಲು, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಜಾತಿ ದೃಢೀಕರಣ ಪತ್ರದೊಂದಿಗೆ ಜನವರಿ 10 ರೊಳಗೆ ಜಿಲ್ಲಾ ವೀರಶೈವ ಮಹಾಸಭಾಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಧರ್ಮಪ್ಪ ತಿಳಿಸಿದರು. ಕೊಡ್ಲಿಪೇಟೆ ಕಲ್ಲುಮಠದ ಮಹಾಂತ ಸ್ವಾಮೀಜಿ ಮಾತನಾಡಿ, ವೀರಶೈವ ಮಹಾ ಸಭಾದ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಗೌರವಿಸುತ್ತಿರುವದು ಶ್ಲಾಘನೀಯ ಕಾರ್ಯ. ಆ ಮೂಲಕ ಎಲ್ಲರೂ ಒಂದೆಡೆ ಸೇರುವ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು.
ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಮಾತನಾಡಿ, ಒಗ್ಗಟ್ಟು ಹಾಗೂ ಸಂಘಟನೆ ಮುಖ್ಯ. ಆಗ ಸಮಾಜ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲರೂ ಒಂದಾಗಿ ಸಾಗಬೇಕೆಂದರು.
ತೊರೆನೂರು ಮಠಾಧೀಶರಾದ ಶ್ರೀ ಮಲ್ಲೇಶ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತರಾಜು, ಉಪಾಧ್ಯಕ್ಷರಾದ ಎಸ್.ಎಸ್. ಸುರೇಶ್, ಹಾಲಪ್ಪ, ನಾಗಣ್ಣ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ವಿಶ್ವನಾಥ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಸಂದೀಪ, ವೀರಶೈವ ಮಹಿಳಾ ಘಟಕದ ರಾಷ್ಟ್ರೀಯ ಮಂಡಳಿ ಕಾರ್ಯದರ್ಶಿ ರಾಜೇಶ್ವರಿ ನಾಗರಾಜ್, ರಾಜ್ಯ ಸಮಿತಿ ಸದಸ್ಯೆ ಮಮತಾ ಸತೀಶ್, ಜಿಲ್ಲೆಯ ಪದಾಧಿಕಾರಿಗಳು, ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.