ವೀರಾಜಪೇಟೆ, ಡಿ. 20 : ಗಂಡನನ್ನು ಬಿಟ್ಟು ಪ್ರಿಯತಮನೊಂದಿಗೆ ವಾಸಿಸುತ್ತಿದ್ದ ಉಷಾ (30) ಎಂಬಾಕೆಯ ಶೀಲ ಶಂಕಿಸಿ ಕತ್ತಿಯಿಂದ ಕಡಿದು ಕೊಲೆ ಮಾಡಲು ಯತ್ನಿಸಿದ ಆರೋಪಿ ಸುಧೀರ್ (26) ಎಂಬಾತನಿಗೆ ಇಂದು ಇಲ್ಲಿನ ಅಪರ ಎರಡನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮೋಹನ್ ಪ್ರಭು ಅವರು 5 ವರ್ಷ ಕಠಿಣ ಸಜೆ ಹಾಗೂ ರೂ. 10,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ತಾ. 18.3.2012ರಂದು ಅಪರಾಹ್ನ 4 ಗಂಟೆ ಸಮಯದಲ್ಲಿ ಉಷಾ ಹೆಬ್ಬಾಲೆ ಭದ್ರಗೊಳ ಗ್ರಾಮದ ಪ್ರಿಯತಮ ಸುಧೀರ್ ಮನೆಗೆ ಬಂದಾಗ ಆಕೆಯನ್ನು ವಿಚಾರಿಸಿ ಸಂಶಯಗೊಂಡು ಮನೆಯೊಳಗೆ ಕರೆದು ಕತ್ತಿಯಿಂದ ಅಂಗಾಂಗಗಳಿಗೆ ಕಡಿದುದಲ್ಲದೆ, ಆಕೆಯ ಎರಡು ಕೈಗಳ ನಾಲ್ಕು ಬೆರಳುಗಳನ್ನು ಆರೋಪಿ ಕತ್ತರಿಸಿದ್ದ. ಈ ಸಮಯದಲ್ಲಿ ಉಷಾಳ 11 ವರ್ಷದ ಮಗ ಹಲ್ಲೆಯನ್ನು ತಡೆದರೂ ಅದನ್ನು ಸುಧೀರ್ ಲೆಕ್ಕಿಸದೆ ಕೊಲೆಗೆ ಯತ್ನಿಸಿದ್ದ ಅಕ್ಕಪಕ್ಕ ಈಕೆಯನ್ನು ನೋಡಿ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸೇರಿಸಿದ್ದರು.

ಪೊನ್ನಂಪೇಟೆ ಪೊಲೀಸರು ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಹಾಗೂ ಕೊಲೆ ಪ್ರಯತ್ನದ ಕುರಿತು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದರು.

ಪ್ರಕರಣ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶ ಮಾರಣಾಂತಿಕ ಹಲ್ಲೆಗಾಗಿ ಶಿಕ್ಷೆ ವಿಧಿಸಿದ್ದು, ರೂ. 10.000 ದಂಡದಲ್ಲಿ ಉಷಾಳಿಗೆ ಪರಿಹಾರವಾಗಿ ರೂ. 5000 ಪಾವತಿಸುವಂತೆ ಹಾಗೂ ಆರೋಪಿ ಈ ತನಕ ನ್ಯಾಯಾಂಗ ಬಂಧನದಲ್ಲಿದ್ದುದನ್ನು ಶಿಕ್ಷೆಯ ಅವಧಿಗೆ ಸೇರಿಸುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಸರಕಾರದ ಪರ ಅಭಿಯಂತರ ಮಹಾಂತಪ್ಪ ವಕಾಲತ್ತು ವಹಿಸಿದ್ದರು.