*ಸಿದ್ದಾಪುರ, ಡಿ. 20: ಎಸ್‍ಡಿಪಿಐ ಪಕ್ಷದ ಕಾರ್ಯಕರ್ತರ ಸಭೆಯು ಇಲ್ಲಿನ ಪ್ಲಾಟಿನಂ ಪ್ಲಾಜಾ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಪಕ್ಷದ ಜಿಲ್ಲಾ ಮುಖಂಡ ಹ್ಯಾರಿಸ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರಕಾರದ ಕಳೆದ ನಾಲ್ಕುವರೆ ವರ್ಷಗಳ ಅಧಿಕಾರವಧಿ ಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಪಸಂಖ್ಯಾತರಿಗೆ ಸಿಗಬೇಕಾದ ಸಂವಿಧಾನಿಕ ಹಕ್ಕುಗಳು ಹಾಗೂ 2013ರ ಚುನಾವಣಾ ಪೂರ್ವ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳು ಈಡೇರದಿರುವದು ಸ್ಪಷ್ಟವಾಗಿದೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ರಂಗನಾಥ ಮಿಶ್ರ ಆಯೋಗದ ಶಿಫಾರಸ್ಸುಗಳು ಜಾರಿಯಾಗಿಲ್ಲ. ವಕ್ಫ್ ಬೋರ್ಡ್‍ಗೆ ಸೇರಿದ ಆಸ್ತಿಯನ್ನು ಹಿಂಪಡೆಯುವ ಭರವಸೆಯುಳ್ಳ ಸರ್ವೆ ಕಾರ್ಯ ಪೂರ್ಣಗೊಂಡಿಲ್ಲ. ಕೆಲವು ಕಡೆ ಸರ್ವೆಯೇ ಪ್ರಾರಂಭ ಮಾಡದೆ ಇರುವದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.

ಜಿಲ್ಲಾ ಕೋಶಾಧಿಕಾರಿ ಇಬ್ರಾಹಿಂ ಮಾತನಾಡಿ, ಮುಂಬರುವ ವಿಧಾಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಪಕ್ಷದ ಕೆಲವು ಅಭ್ಯರ್ಥಿಗಳ ಹೆಸರನ್ನು ಈಗಾಗಲೇ ರಾಜ್ಯ ಸಮಿತಿ ಘೋಷಣೆ ಮಾಡಿದ್ದು, ಶೀಘ್ರದಲ್ಲೇ ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿಯ ಹೆಸರು ಘೋಷಣೆಯಾಗಲಿದೆ ಎಂದರು.

ಈ ಸಂದರ್ಭ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶೌಕತ್ ಅಲಿ, ಸಿದ್ದಾಪುರ ಘಟಕದ ಅಧ್ಯಕ್ಷ ಶಾಹುಲ್, ಪ್ರಮುಖರಾದ ಮುಸ್ತಫ, ಸಂಶೀರ್ ಮತ್ತಿತರರು ಇದ್ದರು.