ಕುಶಾಲನಗರ, ಡಿ. 20: ಟಿಬೇಟಿಯನ್ ಧರ್ಮಗುರು ದಲೈಲಾಮ ಅವರು ಬೈಲುಕೊಪ್ಪೆ ಶಿಬಿರದಲ್ಲಿ ಧಾರ್ಮಿಕ ಪ್ರವಚನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಶಿಬಿರದ ಲಾಮಾಕ್ಯಾಂಪ್‍ನ ಸೆರಾಜೆ ಬೌದ್ಧ ವಿಶ್ವವಿದ್ಯಾಲಯ ಆವರಣದಲ್ಲಿ ದಲೈಲಾಮ ಅವರು ನ್ಯಾಯಾಲಯದ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು. ಈ ನಡುವೆ ಧರ್ಮಗುರುಗಳು ತಮ್ಮ ಸಮಕಾಲೀನರ ಯೋಗಕ್ಷೇಮ ವಿಚಾರಿಸಿದರು.

ಬೆಳಿಗ್ಗೆ 7 ಗಂಟೆಯಿಂದ ಸಂಜೆ ತನಕ ತಮ್ಮ ಅನುಯಾಯಿಗಳಿಗೆ ಬೋಧನೆ ನಡೆಸಿದ ಅವರು ತಾ. 21ರಂದು (ಇಂದು) ಶಿಬಿರದ ವಿವಿಧ ಧಾರ್ಮಿಕ ಮಂದಿರಗಳಿಗೆ ಭೇಟಿ ನೀಡಲಿದ್ದಾರೆ. ಸೆರಾಮೆ ಬೌದ್ಧ ಕೇಂದ್ರದಲ್ಲಿ ಬೆಳಿಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ದಲೈಲಾಮ ಅವರೊಂದಿಗೆ ಶ್ರೀಕ್ಷೇತ್ರ ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ಶ್ರೀ ಆದಿಚುಂಚನಗಿರಿ ಕ್ಷೇತ್ರ ಮಠಾಧೀಶರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರುಗಳು ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭ ನೂತನವಾಗಿ ನಿರ್ಮಾಣಗೊಂಡಿರುವ ಸಮುದಾಯ ಕೇಂದ್ರದ ಉದ್ಘಾಟನೆ ನಡೆಯಲಿದೆ. ದಲೈಲಾಮ ಅವರು ಶುಕ್ರವಾರ ಮುಂಜಾನೆ ಬೈಲುಕೊಪ್ಪೆಯಿಂದ ಬೆಂಗಳೂರು ಕಡೆಗೆ ನಿರ್ಗಮಿಸುವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.