ಶ್ರೀಮಂಗಲ, ಡಿ. 19: ಮೊಬೈಲ್‍ಗಳಿಂದ ಸಂಬಂಧಿಕ ರೊಂದಿಗಿನ ಬಾಂಧವ್ಯ ನಾಶವಾಗುತ್ತಿರುವದರೊಂದಿಗೆ ಏಕಾಗ್ರತೆಗೆ ಧಕ್ಕೆ ಉಂಟಾಗುತ್ತಿದೆ. ವಿದ್ಯಾರ್ಥಿಗಳ ಮೊಬೈಲ್ ಬಳಕೆಗೆ ಪೋಷಕರೆ ಕಡಿವಾಣ ಹಾಕಬೇಕಾಗಿದೆ ಎಂದು ಕೊಡಗು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್. ಮೋಹನ್ ಅಭಿಪ್ರಾಯ ವ್ಯಕ್ತಪಡಿಸಿದರು.ಶ್ರೀಮಂಗಲ ಜೂನಿಯರ್ ಕಾಲೇಜಿನ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಬಾವಿಯೊಳಗಿನ ಕಪ್ಪೆಯಂತಾಗಬಾರದು. ಪುಸ್ತಕದ ವಿದ್ಯಾಭ್ಯಾಸದೊಂದಿಗೆ ಪ್ರಾಪಂಚಿಕ ಆಗುಹೋಗುಗಳನ್ನು ಅರಿತುಕೊಳ್ಳುವದರೊಂದಿಗೆ ಸಾಮಾನ್ಯ ಜ್ಞಾನವನ್ನು ತಿಳಿದುಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಅಧ್ಯಕ್ಷ ಮದ್ರಿರ ಪಿ. ವಿಷ್ಣು ಮಾತನಾಡಿ, ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಲು ಹಿಂದೇಟು ಹಾಕಬಾರದು. ಇಂದಿನ ಪೈಪೋಟಿ ಯುಗದಲ್ಲಿ ವಿದ್ಯೆ ಮಹತ್ತರ ಪಾತ್ರ ವಹಿಸಲಿದ್ದು, ಬದುಕಲು ಕಲಿಕೆ ಅತ್ಯವಶ್ಯಕವಾಗಿದೆ. ಕೂಲಿ ಕೆಲಸಕ್ಕೆ ಕಳುಹಿಸುವ ಬದಲು ಮಕ್ಕಳನ್ನು ಮೊದಲು ವಿದ್ಯಾವಂತರನ್ನಾಗಿ ಮಾಡಬೇಕು ಎಂದರು.

ಈ ಸಂದರ್ಭ ವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನ, ಪ್ರೋತ್ಸಾಹಕ ಬಹುಮಾನ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾ ಪ್ರತಿಭೆಗಳಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿವಿಧ ಬಹುಮಾನಗಳನ್ನು ನೀಡಲಾಯಿತು.

ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಸ್ಥಳ ದಾನಿಗಳಾದ ಅಜ್ಜಮಾಡ ಕಿಶೋರ್, ದಾನಿಗಳಾದ ಕೈಬಿಲೀರ ಪಾರ್ವತಿ ಬೋಪಯ್ಯ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಚೊಟ್ಟೆಯಂಡಮಾಡ ವಿಶ್ವನಾಥ್, ಆಡಳಿತ ಮಂಡಳಿ ಉಪಾಧ್ಯಕ್ಷ ಮಚ್ಚಮಾಡ ಸುಬ್ರಮಣಿ, ಕಾರ್ಯದರ್ಶಿ ಕಟ್ಟೇರ ಸುಶಿಲಾ ಅಚ್ಚಪ್ಪ, ಖಜಾಂಚಿ ಕೆ.ಎಸ್. ಸಂದೀಪ್, ನಿರ್ದೇಶಕರಾದ ಕುಂಞಂಗಡ ರಮೇಶ್, ಮಂದಮಾಡ ಗಣೇಶ್, ತಡಿಯಂಗಡ ಸುಬ್ಬಯ್ಯ, ಪ್ರಾಂಶುಪಾಲ ಕೋಟ್ರಂಗಡ ಚಂಗಪ್ಪ, ನಿವೃತ್ತ ಪ್ರಾಂಶುಪಾಲ ಬಾಚಿರ ಕಾರ್ಯಪ್ಪ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ರತ್ನಮ್ಮ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಚೆಟ್ಟಂಗಡ ಸುನಿತಾ ಕಿರಣ್, ಅರುಣಾಚಲ್, ವಿದ್ಯಾರ್ಥಿ ಸಂಘದ ನಾಯಕರು ಹಾಜರಿದ್ದರು.