*ಗೋಣಿಕೊಪ್ಪಲು, ಡಿ. 19: ನೈಸರ್ಗಿಕ ಹಕ್ಕುಗಳೇ ಮಾನವ ಹಕ್ಕುಗಳು. ಇವುಗಳನ್ನೂ ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ವೀರಾಜಪೇಟೆ ಜೆಎಂಎಫ್‍ಸಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಶಿವಾನಂದ್ ಲಕ್ಷ್ಮಣ್ ಅಂಚಿ ಹೇಳಿದರು.
ತಿತಿಮತಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವೀರಾಜಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಕಾನೂನು ಅರಿವು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮನುಷ್ಯ ಗೌರವಯುತವಾಗಿ ಬದುಕಬೇಕು. ಬೇರೆಯವರ ಹಕ್ಕುಗಳನ್ನು ಗೌರವಿಸಬೇಕು. ಅನ್ಯಾಯವಾದಾಗ ಸಹಿಸಿಕೊಳ್ಳಬಾರದು. ನ್ಯಾಯಾಲಯ, ಪೊಲೀಸ್ ಠಾಣೆ ಬಗ್ಗೆ ವಿಶ್ವಾಸವಿರಬೇಕು ಎಂದು ಹೇಳಿದರು.
ಉಪನ್ಯಾಸ ನೀಡಿದ ವಕೀಲ ಮಹಮದ್ ರಫೀಕ್ ನವಲಗುಂದ, ಭ್ರೂಣದಲ್ಲಿರುವಾಗಲೇ ಆರಂಭಗೊಂಡ ಮಾನವಹಕ್ಕು ಸಾಯುವವರೆಗೂ ಇರುತ್ತದೆ. ಇವುಗಳ ಉಲ್ಲಂಘನೆಯಾದಾಗ ಕಾನೂನು ಮಧ್ಯಪ್ರವೇಶ ಮಾಡುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ಜಿ. ಕಾಮತ್ ಮಾತನಾಡಿ, ಆಧುನಿಕ ತಂತ್ರಜ್ಞಾನದ ಬೆಳವಣಿಗೆ ಮತ್ತು ಸೌಲಭ್ಯಗಳಿಂದ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ. ಪುರುಷನಷ್ಟೆ ಸಮಾನವಾದ ಅವಕಾಶ ಹೆಣ್ಣು ಮಕ್ಕಳಿಗಿದ್ದರೂ ಅವರು ಅದನ್ನು ಬಳಸಿಕೊಳ್ಳುವದಿಲ್ಲ. ಅವರು ತ್ಯಾಗಜೀವಿಗಳು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಬಿ. ರಾಜಣ್ಣ ಮಾತನಾಡಿ, ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಪಾಲಿದ್ದರೂ ಅದನ್ನು ಅವರು ಪಡೆದುಕೊಳ್ಳುವದಿಲ್ಲ. ಅದನ್ನು ಗಂಡು ಮಕ್ಕಳಿಗೆ ಇರಲಿ ಎಂದು ಬಯಸುತ್ತಾರೆ. ಅವರಿಗಿರುವ ತಾಳ್ಮೆ, ತ್ಯಾಗ ಮನೋಭಾವನೆ ಅದಮ್ಯವಾದುದು ಎಂದು ಬಣ್ಣಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಹಾಗೂ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಪ್ಪುಡೀರ ರಾಮಕೃಷ್ಣ, ಮನು ನಂಜಪ್ಪ, ಹಿರಿಯ ಉಪನ್ಯಾಸಕರಾದ ಶಂಭು, ಡಾ. ಜೆ. ಸೋಮಣ್ಣ, ಸರ್ವೋತ್ತಮ, ಸರೋಜ, ಗೌತಮ್, ರಮೇಶ್, ನಯನ ಹಾಜರಿದ್ದರು.