ಸೋಮವಾರಪೇಟೆ, ಡಿ. 19: ದಾವಣಗೆರೆಯ ಅನ್ವೇಷಕ ಕಾಲೇಜು ರಂಗಯಾತ್ರೆ ತಂಡದವರಿಂದ ಇಲ್ಲಿನ ಚನ್ನ ಬಸಪ್ಪ ಸಭಾಂಗಣ ದಲ್ಲಿ ಆಯೋಜಿಸ ಲಾಗಿದ್ದ ಎರಡು ನಾಟಕಗಳ ಪ್ರದರ್ಶನದಲ್ಲಿ ಕಲಾವಿದರು ಪಾತ್ರಗಳಿಗೆ ಜೀವ ತುಂಬಿ ಮನೋಜ್ಞವಾಗಿ ಅಭಿನಯಿಸಿದರು. ದ್ವಿತೀಯ ಪಿಯುಸಿಯ ಪಠ್ಯವಾಗಿರುವ ಪೂರ್ಣಚಂದ್ರ ತೇಜಸ್ವಿಯವರ ‘ಕೃಷ್ಣೇಗೌಡನ ಆನೆ’ ನೀಳ್ಗತೆ ಆಧಾರಿತ ನಾಟಕ ವಿದ್ಯಾರ್ಥಿಗಳನ್ನು ಆಕರ್ಷಿಸಿತು. ಕಲಾವಿದ ಎಸ್.ಎಸ್. ಸಿದ್ದರಾಜು ಅವರ ನಿರ್ದೇಶನದ ನಾಟಕದಲ್ಲಿ ಶೋಷಣೆ, ಭ್ರಷ್ಟಾಚಾರ, ಮೋಸ, ಪ್ರಕೃತಿ ನಾಶದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹವ್ಯಾಸಿ ಕಲಾವಿದರು ಮನೋಜ್ಞವಾಗಿ ನಟಿಸಿದರು.
ಸೋಮವಾರಪೇಟೆಯ ಕಲಾವಿದ ಮಧು ನಿರ್ದೇಶನದ, ಚಂದ್ರಶೇಖರ ಕಂಬಾರರ ಕಥೆ ‘ಬೋಳು ಶಂಕರ್’ ನಾಟಕವನ್ನು ಪ್ರಥಮ ಪಿಯುಸಿ ವಿದ್ಯಾರ್ಥಿಗಳು ವೀಕ್ಷಿಸಿದರು. ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅಣ್ಣಮ್ಮ ಹಾಗೂ ವಿದ್ಯಾರ್ಥಿಗಳು ನಾಟಕಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾರುತಿ ಬೈಂದೂರು, ಪುರುಷೋತ್ತಮ ಸಾಗರ, ಬಳ್ಳಾರಿ ಜಿಲ್ಲೆಯ ಮಹಾಂತೇಶ್, ಮೋಹನ್, ಸೈಪುಲ್ಲಾ, ಮಂಜುನಾಥ್, ನಾಗರಾಜು ದಾವಣಗೆರೆ, ಗಂಗಾಧರ್ ಮೂಡಿಗೆರೆ ನಾಟಕದ ಪಾತ್ರ ವರ್ಗದಲ್ಲಿದ್ದರು.