ಸೋಮವಾರಪೇಟೆ, ಡಿ. 20: ಪಟ್ಟಣ ಪಂಚಾಯಿತಿ ಸಾಮಾನ್ಯ ನಿಧಿಯಡಿ ಎಲ್ಲಾ ವಾರ್ಡ್‍ಗಳಿಗೆ ತಲಾ 1ಲಕ್ಷ ಅನುದಾನ ನೀಡಬೇಕೆಂದು ಪ.ಪಂ. ಸದಸ್ಯರುಗಳು ಅಧ್ಯಕ್ಷರನ್ನು ಆಗ್ರಹಿಸಿದರು. ಇಲ್ಲಿನ ಪ.ಪಂ. ಸಾಮಾನ್ಯ ಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಕಳೆದ ನಾಲ್ಕು ವರ್ಷದಿಂದ ಸಾಮಾನ್ಯ ನಿಧಿಯಡಿ ವಾರ್ಡ್‍ಗಳ ಅಭಿವೃದ್ಧಿಗೆ 100 ರೂಪಾಯಿಯೂ ಬಂದಿಲ್ಲ. ಸರ್ಕಾರದ ಇತರ ಯೋಜನೆಗಳಡಿ ಬಿಡುಗಡೆಯಾಗುವ ಹಣವನ್ನೂ ಹೊರಭಾಗಕ್ಕೆ ವಿನಿಯೋಗಿಸಿದರೆ ಪಟ್ಟಣದ ವಾರ್ಡ್‍ಗಳಿಗೆ ಏನು ಮಾಡೋದು? ಎಂದು ಸದಸ್ಯ ಆದಂ ಪ್ರಶ್ನಿಸಿದರು.

ಇದಕ್ಕೆ ದನಿಗೂಡಿಸಿದ ಸದಸ್ಯೆ ಲೀಲಾ ನಿರ್ವಾಣಿ ಸೇರಿದಂತೆ ಇತರರು, ಎಲ್ಲಾ ವಾರ್ಡ್‍ಗಳಿಗೂ ತಲಾ 1 ಲಕ್ಷ ಅನುದಾನ ನೀಡಿ ಎಂದು ಅಧ್ಯಕ್ಷರನ್ನು ಒತ್ತಾಯಿಸಿದರು. ಎಸ್‍ಎಫ್‍ಸಿ ಯೋಜನೆಯಡಿ 4.80ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಈ ಹಣವನ್ನು ಯಡವನಾಡು ಪಂಪ್‍ಹೌಸ್ ಬಳಿ ವಸತಿ ಗೃಹ ನಿರ್ಮಿಸುವದಕ್ಕೆ ವಿನಿಯೋಗಿಸುವ ಬಗ್ಗೆ ನಡೆದ ಚರ್ಚೆ ಸಂದರ್ಭ ಆದಂ ಸೇರಿದಂತೆ ಇತರ ಸದಸ್ಯರು ಮೊದಲು ವಾರ್ಡ್‍ಗಳ ಅಭಿವೃದ್ಧಿಗೆ ಒತ್ತು ನೀಡಿ ಎಂದು ಒತ್ತಾಯಿಸಿದರು.

ಸಭೆಗಳಲ್ಲಿ ಚರ್ಚೆಯಾಗುವ ಮೊದಲೇ ಹಲವಷ್ಟು ಕಾಮಗಾರಿಗೆಗಳಿಗೆ ಕ್ರಿಯಾಯೋಜನೆ ತಯಾರಿಸಲಾಗಿದೆ. ಎಲ್ಲವನ್ನೂ ಕಚೇರಿಯಲ್ಲೇ ಕುಳಿತುಕೊಂಡು ಮಾಡುವದಾದರೆ ಚುನಾಯಿತ ಜನಪ್ರತಿನಿಧಿಗಳ ಸಭೆ ನಡೆಸುವದಾದರೂ ಏಕೆ? ಕಾಟಾಚಾರದ ಸಭೆಗಳು ಬೇಡ. ಸಭೆಯಲ್ಲಿ ಚರ್ಚಿಸಲ್ಪಡುವ ವಿಷಯಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ನಡಾವಳಿಗಳನ್ನು ತಿರುಚಲಾಗುತ್ತಿದೆ. ಅಧಿಕಾರಿ ವರ್ಗ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸದಸ್ಯರುಗಳಾದ ಶೀಲಾ ಡಿಸೋಜ, ಆದಂ, ಇಂದ್ರೇಶ್ ಅವರುಗಳು ಆರೋಪಿಸಿದರು.

ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳಿಗೆ ಇಂದಿಗೂ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. 10 ವರ್ಷ ಕಳೆದರೂ ಮಳಿಗೆಗಳನ್ನು ವಿಲೇವಾರಿ ಮಾಡಿಲ್ಲ. ಇದರಿಂದ ಪಂಚಾಯಿತಿಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ತಕ್ಷಣ ಮಳಿಗೆಗಳ ವಿಲೇವಾರಿಗೆ ಕ್ರಮ ಕೈಗೊಳ್ಳಿ ಎಂದು ಆದಂ ಒತ್ತಾಯಿಸಿದರು.

ಪಂಚಾಯಿತಿ ವ್ಯಾಪ್ತಿಯ ಹಲವಷ್ಟು ಮಳಿಗೆಗಳು ಬಾಡಿಗೆ ಕಟ್ಟುತ್ತಿಲ್ಲ. ಕರ ವಸೂಲಿ ಸಮರ್ಪಕವಾಗಿಲ್ಲ. ಹೀಗಾಗಿ ಪಂಚಾಯಿತಿಯ ಸಾಮಾನ್ಯ ನಿಧಿಯಲ್ಲಿ ಹಣದ ಕೊರತೆ ಕಂಡುಬರುತ್ತಿದೆ. ಸಾಮಾನ್ಯ ನಿಧಿಯ ಹಣವನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಅಧ್ಯಕ್ಷೆ ವಿಜಯಲಕ್ಷ್ಮೀ ಅವರನ್ನು ಒತ್ತಾಯಿಸಿದರು.

ಪಟ್ಟಣ ವ್ಯಾಪ್ತಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಲು ಟೆಂಡರ್ ಕರೆಯಲಾಗಿದ್ದು, ಇದುವರೆಗೂ ಕ್ರಮ ಕೈಗೊಂಡಿಲ್ಲ. ಒಂದನೇ ಬಿಡ್ಡುದಾರರಿಗೆ ನೀಡಲು ಸಾಧ್ಯವಿಲ್ಲವೆಂದಾದರೆ ಎರಡನೇ ಬಿಡ್ಡುದಾರರನ್ನು ಕರೆದು ಕಾಮಗಾರಿ ವಹಿಸುವಂತೆ ಸೂಚಿಸಿದ್ದರೂ ಸಂಬಂಧಿಸಿದ ಅಭಿಯಂತರರು ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದ ಅಧ್ಯಕ್ಷರು, ಅಭಿಯಂತರರು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆಯುವದಾಗಿ ಎಚ್ಚರಿಸಿದರು.

ಜೇಸೀ ವೇದಿಕೆ ಮುಂಭಾಗ ನಿರ್ಮಿಸಿರುವ ನೂತನ ಸಭಾಂಗಣವನ್ನು ಇದೀಗ ಮಳಿಗೆ ಮಾಡಲು ನಿರ್ಧರಿಸಿರುವದು ಸರಿಯಲ್ಲ. ಈಗಾಗಲೇ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರೀ ಮಳಿಗೆಗಳೇ ತುಂಬಿ ಹೋಗಿವೆ. ಮಳಿಗೆಗಳನ್ನು ನಿರ್ಮಿಸುವ ಬದಲು ಇರುವ ಅಂಗಡಿಗಳನ್ನೇ ವಿಲೇವಾರಿ ಮಾಡಿ. ಇದಕ್ಕೆ ವಿನಿಯೋಗಿಸುವ ಹಣವನ್ನು ಇತರ ಮೂಲಸೌಕರ್ಯಕ್ಕೆ ಬಳಸಿ ಎಂದು ಆದಂ ಸಲಹೆ ನೀಡಿದರು.

ಈಗಿರುವ ಮಳಿಗೆಯಲ್ಲಿ ಮಳೆಗಾಲದ ಸಂದರ್ಭ ನೀರು ಸೋರಿಕೆಯಾಗಿ ಅಂಗಡಿ ಮಾಲೀಕರು ಸಂಕಷ್ಟ ಎದುರಿಸುತ್ತಿದ್ದಾರೆ. ಮೊದಲು ಪೈಪ್ ಲೈನ್ ಅಳವಡಿಸಲು ಕ್ರಮ ಕೈಗೊಳ್ಳಿ ಎಂದು ಶೀಲಾ ಡಿಸೋಜ ಆಗ್ರಹಿಸಿದರು. ಬಾಡಿಗೆ ಪಾವತಿಸದ ಅಂಗಡಿ ಮಳಿಗೆಗಳಿಗೆ ಬೀಗ ಹಾಕಲೆಂದು 2640 ರೂಪಾಯಿ ವ್ಯಯಿಸಿ ಬೀಗ ಖರೀದಿಸಲಾಗಿದೆ. ಎಷ್ಟು ಅಂಗಡಿಗೆ ಬೀಗ ಹಾಕಿದ್ದೀರಿ? ಎಷ್ಟು ಬೀಗ ಖರೀದಿಸಿದ್ದೀರಿ? ಎಂದು ಆದಂ ಅವರು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಬೇಕಾದ ಅಧಿಕಾರಿ ಸಭೆಯಲ್ಲಿ ಇಲ್ಲದೇ ಇದ್ದುದರಿಂದ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಮಡಿಕೇರಿ ರಸ್ತೆಯಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಇವುಗಳಿಂದಾಗಿ ಟ್ರಾಫಿಕ್ ಸಮಸ್ಯೆ ಉದ್ಭವಿಸಿದ್ದು, ಸಫಾಲಿ ಬಾರ್ ಮುಂಭಾಗದಿಂದ ವಿವೇಕಾನಂದ ವೃತ್ತದವರೆಗೆ ಇರುವ ಅಂಗಡಿಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದು ಸದಸ್ಯ ಉದಯಶಂಕರ್ ಒತ್ತಾಯಿಸಿದರು. ಇದಕ್ಕೆ ಇತರ ಸದಸ್ಯರೂ ಸಹ ಸಹಮತ ವ್ಯಕ್ತಪಡಿಸಿದರು.

ಕಕ್ಕೆಹೊಳೆ ಬಳಿ ನೂತನವಾಗಿ ನಿರ್ಮಿಸಿರುವ ಬೃಹತ್ ಕಟ್ಟಡಕ್ಕೆ ಪ.ಪಂ.ನಿಂದ ಯಾವದೇ ಪರವಾನಗಿ ಪಡೆದಿಲ್ಲ. ತಕ್ಷಣ ಈ ಕಟ್ಟಡಕ್ಕೆ ಬೀಗ ಜಡಿದು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಸದಸ್ಯ ಸುರೇಶ್ ಸೇರಿದಂತೆ ಇತರ ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು.

ಪ.ಪಂ.ನ 3ನೇ ವಾರ್ಡ್‍ನಲ್ಲಿರುವ ಅಂಬೇಡ್ಕರ್ ಭವನದ ಶೌಚಾಲಯ ದುರಸ್ತಿ, ನೀರಿನ ಟ್ಯಾಂಕ್, ಅಡುಗೆ ಮನೆಗೆ ಸ್ಲ್ಯಾಬ್ ಅಳವಡಿಸುವದು, 9ನೇ ವಾರ್ಡ್‍ನ ರೇಂಜರ್ ಬ್ಲಾಕ್‍ನಲ್ಲಿ ಚರಂಡಿ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಸ್ಥಳೀಯ ಸದಸ್ಯರ ಗಮನಕ್ಕೆ ಬಾರದಂತೆ ಟೆಂಡರ್ ಕರೆಯಲಾಗಿದ್ದು, ತಕ್ಷಣ ಇದನ್ನು ರದ್ದುಗೊಳಿಸಿ ನೂತನ ಟೆಂಡರ್ ಕರೆಯುವಂತೆ ಆದಂ ಆಗ್ರಹಿಸಿದರು.

ನ್ಯಾಯಾಲಯದ ಸಿಬ್ಬಂದಿಗಳಿಗೆ ಪ.ಪಂ. ವಸತಿ ಗೃಹ ನೀಡುವಂತೆ ಪತ್ರ ಬಂದಿದ್ದು, ಸದ್ಯಕ್ಕೆ ಪ.ಪಂ.ನಲ್ಲಿ ವಸತಿ ಗೃಹಗಳಿಲ್ಲ. ಲೋಕೋಪಯೋಗಿ ಇಲಾಖೆಗೆ ಒಳಪಡುವ ವಸತಿ ಗೃಹಗಳು ಸಾಕಷ್ಟಿದ್ದು, ಅವುಗಳನ್ನು ಬಳಸಿಕೊಳ್ಳಲು ಮರು ಪತ್ರ ಬರೆಯಿರಿ ಎಂದು ಆದಂ, ಇಂದ್ರೇಶ್ ಅವರುಗಳು ಸಲಹೆ ನೀಡಿದರು. ಪಂಚಾಯಿತಿ ವ್ಯಾಪ್ತಿಯಲ್ಲಿರುವ ದನ ಹಾಗೂ ಕುರಿ ದೊಡ್ಡಿಗಳಿಗೆ ಬೇಲಿ ನಿರ್ಮಿಸಿ ಜಾಗವನ್ನು ರಕ್ಷಿಸಬೇಕು. ಬಸ್ ನಿಲ್ದಾಣಗಳನ್ನು ದುರಸ್ತಿಗೊಳಿಸಬೇಕು ಎಂಬ ಸಲಹೆಗಳು ಸಭೆಯಲ್ಲಿ ಕೇಳಿಬಂದವು.

ಪೌರ ಕಾರ್ಮಿಕರಿಗೆ ನಿವೇಶನ ನೀಡುವ ಬಗ್ಗೆ ಹಿಂದಿನಿಂದಲೂ ಒತ್ತಾಯಿಸುತ್ತಲೇ ಬಂದಿದ್ದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ಶೀಲಾ ಡಿಸೋಜ ಆಕ್ಷೇಪಿಸಿದರು. ಹೊಸ ಬಡಾವಣೆಯಲ್ಲಿ 18 ನಿವೇಶನಗಳಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅಲ್ಲಿಂದ ಬರುವ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವದು ಎಂದು ಮುಖ್ಯಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಷ್ಮಾ ಸುಧಾಕರ್, ಸದಸ್ಯರುಗಳಾದ ಈಶ್ವರ್, ಮೀನಾಕುಮಾರಿ, ಸುಶೀಲ, ವೆಂಕಟೇಶ್, ಪ.ಪಂ. ಆರೋಗ್ಯ ನಿರೀಕ್ಷಕ ಉದಯಕುಮಾರ್, ಸಿಬ್ಬಂದಿಗಳಾದ ರೂಪಾ, ಭಾವನಾ, ಡಿಸೋಜ, ರಫೀಕ್ ಅವರುಗಳು ಉಪಸ್ಥಿತರಿದ್ದರು.