ಮಡಿಕೇರಿ, ಡಿ.20 : ಕೊಡಗು ಜಿಲ್ಲೆಯಲ್ಲಿ ಯುವ ಸಮೂಹವನ್ನು ಒಗ್ಗೂಡಿಸಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ತಾ. 22 ರಂದು ಶಿರಂಗಾಲದಿಂದ ಕುಶಾಲನಗರದವರೆಗೆ ಹೋಬಳಿ ಮಟ್ಟದ ಕಾರ್ಯಕರ್ತರ ಬೃಹತ್ ಪಾದಯಾತ್ರೆ ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್‍ನ ಕೊಡಗು ಜಿಲ್ಲಾ ಘಟಕದಿಂದ ಏರ್ಪಡಿಸ ಲಾಗಿದೆ. ಸುದ್ದಿಗೋಷ್ಠಿಯಲ್ಲಿ ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಮಾತನಾಡಿ, ಅಂದು ಬೆಳಿಗ್ಗೆ 8 ಗಂಟೆಗೆ ಶಿರಂಗಾಲದಿಂದ ಪಾದಯಾತ್ರೆ ಆರಂಭಗೊಂಡು ಸಂಜೆ 4 ಗಂಟೆಗೆ ಕುಶಾಲನಗರದಲ್ಲಿ ಸಮಾರೋಪ ಗೊಳ್ಳಲಿದೆ. ಪಾದಯಾತ್ರೆಯಲ್ಲಿ ಐಎನ್‍ಟಿಯುಸಿ ಕಾರ್ಯಕರ್ತರು, ಪಕ್ಷದ ಪ್ರಮುಖರು, ವಿವಿಧ ಘಟಕಗಳ ಮುಖಂಡರು ಸೇರಿದಂತೆ ಸಾವಿರಕ್ಕೂ ಹೆಚ್ಚಿನ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ದಶಕಗಳಿಂದ ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿದಿದ್ದು, ಪ್ರಸ್ತುತ ಪಕ್ಷವನ್ನು ಬಲಪಡಿಸುವ ಅನಿವಾರ್ಯತೆ ಇದೆಯೆಂದ ಅವರು ಪಕ್ಷವನ್ನು ಬೂತ್ ಹಂತದಿಂದಲೇ ಬೆಳೆಸುವ ಪ್ರಯತ್ನ ನಡೆಸಲಾಗುತ್ತಿದೆಯೆಂದರು.
ರಾಜ್ಯ ಸರ್ಕಾರದಿಂದ ಅಭಿವೃದ್ಧಿಗೆ ಹಣ ಬರುತ್ತಿಲ್ಲವೆಂದು ಟೀಕಿಸುವ ಬಿಜೆಪಿ ಮಂದಿ ಪ್ರತಿನಿತ್ಯ ಅಭಿವೃದ್ಧಿ ಕಾರ್ಯಗಳಿಗೆ ಗುದ್ದಲಿ ಪೂಜೆ ನಡೆಸುತ್ತಿದ್ದಾರೆ. ಇದಕ್ಕೆ ಹಣವೆಲ್ಲಿಂದ ಬಂತೆಂದು ಪ್ರಶ್ನಿಸಿದ ಮುತ್ತಪ್ಪ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳು ಮತ್ತು ಅನುದಾನದ ಬಗ್ಗೆ ‘ಶ್ವೇತ ಪತ್ರ’ ಹೊರಡಿಸುವ ಬಗ್ಗೆ ಬಿಜೆಪಿ ಹೇಳಬೇಕಿಲ್ಲ; ಆ ವಿವರಗಳು ಬೇಕಿದ್ದಲ್ಲಿ ಲೋಕೋಪಯೋಗಿ ಮತ್ತು ಜಿಲ್ಲಾ ಪಂಚಾಯಿತಿಗಳಿಂದ ಮಾಹಿತಿ ಹಕ್ಕಿನ ಮೂಲಕ ಪಡೆದುಕೊಳ್ಳಬಹುದೆಂದು ನುಡಿದರು. ಐ.ಎನ್.ಟಿ.ಯು.ಸಿ.ಯ ಯುವ ಘಟಕದ ಜಿಲ್ಲಾಧ್ಯಕ್ಷ ಪವನ್ ಪೆಮ್ಮಯ್ಯ, ಯುವ ಸಂಘಟನಾ ಕಾರ್ಯದರ್ಶಿ ರವಿ ಮಾದಪ್ಪ, ಸಂಘಟನ ಕಾರ್ಯದರ್ಶಿ ಚಪ್ಪೇರ ಯತೀನ್, ನಗರ ಅಧ್ಯಕ್ಷರಾದ ಮುನೀರ್ ಮಾಚಾರ್, ಉದಯ ಕುಮಾರ್ ಉಪಸ್ಥಿತರಿದ್ದರು.