ಸೋಮವಾರಪೇಟೆ, ಡಿ. 20: ಸಮೀಪದ ಕಿರಗಂದೂರು ಗ್ರಾಮ ಸಮೀಪದ ಒಡ್ಡುಗಲ್ಲು ಎಂಬ ಸ್ಥಳದಲ್ಲಿ ಮಂಗಳವಾರ ಸಂಜೆ ಹುಲಿ ಪ್ರತ್ಯಕ್ಷಗೊಂಡಿರುವ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಭಯಗೊಂಡ ಯುವಕರು ಕಾರನ್ನು ನಿಲ್ಲಿಸಿದ ಸಂದರ್ಭ ಹತ್ತು ಅಡಿ ದೂರದಲ್ಲಿ ರಸ್ತೆಯಿಂದ ಕಾಫಿ ತೋಟದೊಳಕ್ಕೆ ನುಸುಳಿತು ಎನ್ನಲಾಗಿದ್ದು, ಈ ಬಗ್ಗೆ ಸೋಮವಾರಪೇಟೆ ಅರಣ್ಯ ಇಲಾಖೆಗೆ ನಿತೀನ್ ಮಾಹಿತಿ ನೀಡಿದ ಹಿನ್ನೆಲೆ, ಅರಣ್ಯ ಇಲಾಖಾ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಕಾರಿನ ಲೈಟ್ ಬೆಳಕಿಗೆ ಹುಲಿಯ ಶರೀರವನ್ನು ಪೂರ್ಣ ಪ್ರಮಾಣದಲ್ಲಿ ನೋಡಿದ್ದು, ಪ್ರಾಣಿ ಬಲಿಷ್ಟವಾಗಿದೆ. ಹುಲಿಯಿರುವ ಮಾಹಿತಿಯನ್ನು ಎಸ್ಟೇಟ್ ವ್ಯವಸ್ಥಾಪಕರಿಗೆ ತಿಳಿಸಲಾಗಿದೆ. ಅರಣ್ಯ ಇಲಾಖೆಗೂ ಮಾಹಿತಿ ನೀಡಲಾಗಿದೆ ಎಂದು ನಿತೀನ್ ತಿಳಿಸಿದ್ದಾರೆ.
ಸಿಬ್ಬಂದಿಗಳಿಗೆ ಕಾಡು ಪ್ರಾಣಿಯ ಹೆಜ್ಜೆ ಗುರುತು ಕಂಡುಬಂದಿದೆ ಎನ್ನಲಾಗಿದ್ದು, ನೀರು ಇರುವ ಕಡೆ, ಹೆಜ್ಜೆಗಳನ್ನು ಹುಡುಕುತ್ತಿದ್ದಾರೆ. ರಾತ್ರಿ ವೇಳೆ ಕಂಡುಬಂದ ಪ್ರಾಣಿ ಹುಲಿಯೇ ಅಥವಾ ಬೇರೆ ಪ್ರಾಣಿಯೇ ಎಂಬ ಬಗ್ಗೆ ಇನ್ನೂ ಖಚಿತತೆಗೆ ಬಂದಿಲ್ಲ. ತಾ. 3ರ ರಾತ್ರಿ ನಗರೂರು ಕಾಫಿ ತೋಟದ ಲೈನ್‍ಮನೆಯಲ್ಲಿ ವಾಚ್‍ಮನ್ ಆಗಿದ್ದ ತಿಮ್ಮಪ ್ಪ(67) ಎಂಬವರನ್ನು ಕಾಡುಪ್ರಾಣಿ ಕೊಂದು ಮುಖದ ಭಾಗವನ್ನು ತಿಂದಿರುವ ಘಟನೆ ನಡೆದಿತ್ತು. ಈ ಪ್ರಕರಣದ ಬಗ್ಗೆ ಸ್ಥಳೀಯರು ಹುಲಿ ಧಾಳಿ ಎಂದೇ ಭಾವಿಸಿದ್ದರು. ಈ ಘಟನೆಯ ಬಗೆಗಿನ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಯುತ್ತಿದೆ.
ಕಿರಗಂದೂರು ಸಮೀಪದ ಒಡ್ಡುಗಲ್ಲು ಎಂಬ ಸ್ಥಳದಲ್ಲಿ ಹುಲಿ ಪ್ರತ್ಯಕ್ಷವಾದ ಘಟನೆಗೆ ಸಂಬಂಧಪಟ್ಟಂತೆ ಸ್ಥಳದಲ್ಲಿ ಪರಿಶೀಲನೆ ನಡೆಸಲಾಗಿದೆ. ಸ್ಥಳದಲ್ಲಿ ಕಾಡುಪ್ರಾಣಿಯ ಹೆಜ್ಜೆ ಗುರುತು ಕಂಡುಬಂದಿದ್ದು, ಕಾಡುಬೆಕ್ಕು ಅಥವಾ ಹುಲಿ ಹೆಜ್ಜೆಯೋ ಎಂಬದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ತಿಳಿಸಿದ್ದಾರೆ.