ಮಡಿಕೇರಿ, ಡಿ. 20: ಭಗವದ್ಗೀತೆಯ ಪ್ರಚಾರದೊಂದಿಗೆ ದೇಶದೆಲ್ಲೆಡೆ ಸಂಚರಿಸುತ್ತಿರುವ ಅಂತರ್ರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ 34ನೇ ವರ್ಷದ ಪಾದಯಾತ್ರೆಯು ತಾ. 24 ರಂದು ಜಿಲ್ಲಾ ಕೇಂದ್ರ ಮಡಿಕೇರಿಗೆ ಆಗಮಿಸಲಿದೆ. 1984ರಲ್ಲಿ ವಿಶೇಷವಾಗಿ ಎತ್ತಿನಗಾಡಿ ಮುಖಾಂತರ ಬೃಂದಾವನದ ಇಸ್ಕಾನ್ ಬಳಗವು ಚೈತನ್ಯ ಪ್ರಭು ಪಾದರ ಪ್ರೇರಣೆಯೊಂದಿಗೆ ಆರಂಭಿಸಿರುವ ಈ ಯಾತ್ರೆ ದೇಶದೆಲ್ಲೆಡೆ ಅನೇಕ ಬಾರಿ ಸಂಚರಿಸುತ್ತಾ ಲಕ್ಷೋಪಲಕ್ಷ ಭಗವದ್ಗೀತೆ ಓದುಗರನ್ನು ತಲಪಿಸಿದೆ.

ಇತ್ತೀಚೆಗೆ ಉಡುಪಿಯಲ್ಲಿ ಜರುಗಿದ ಧರ್ಮ ಸಂಸತ್‍ನಲ್ಲಿ ಪಾಲ್ಗೊಂಡಿದ್ದ ಇಸ್ಕಾನ್ ಯಾತ್ರೆ, ದಕ್ಷಿಣ ಕನ್ನಡದ ಅನೇಕ ಕ್ಷೇತ್ರಗಳ ದರ್ಶನದೊಂದಿಗೆ ತಾ. 24 ರಂದು ಕಾವೇರಿ ನಾಡಿಗೆ ಪ್ರವೇಶಿಸಲಿದೆ ಎಂದು ಇಲ್ಲಿನ ಇಸ್ಕಾನ್ ಬಳಗದ ರಾಜಾ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.