ಸೋಮವಾರಪೇಟೆ, ಡಿ. 19: ಪಟ್ಟಣದ ಹೈಟೆಕ್ ಮಾರುಕಟ್ಟೆಗೆ ಹೊಂದಿಕೊಂಡಿರುವ ಅಕ್ಕಿ ಮಾರಾಟ ಮಾಡುವ ಸ್ಥಳದಲ್ಲಿ ಒಣಮೀನು ಮಾರಾಟಕ್ಕೆ ಪಟ್ಟಣ ಪಂಚಾಯಿತಿ ಅವಕಾಶ ಮಾಡಿಕೊಟ್ಟಿರುವದು ಸರಿಯಲ್ಲ. ಆ ಸ್ಥಳದಲ್ಲೇ ಅಕ್ಕಿ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕೆಂದು ಅಕ್ಕಿ ಮಾರಾಟಗಾರರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಮಾಡಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಮಾರುಕಟ್ಟೆ ಆವರಣದಲ್ಲಿ ಅಕ್ಕಿ ಮಾರಾಟ ಮಾಡಿಕೊಂಡು ಬದುಕು ಸಾಗಿಸುತ್ತಿದ್ದೇವೆ. ಈಗ ಅದೇ ಸ್ಥಳದಲ್ಲಿ ಮೀನು ಮಾರಾಟಗಾರರಿಗೆ ಕಟ್ಟಡ ನಿರ್ಮಿಸಲು ಅನುಮತಿ ನೀಡಿರುವದು ಸರಿಯಲ್ಲ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವದು. ಈ ಬಗ್ಗೆ ಶಾಸಕರಿಗೂ ಮನವಿ ಸಲ್ಲಿಸಲಾಗಿದೆ ಎಂದು ಅಕ್ಕಿ ಮಾರಾಟಗಾರ ಮಂಜುನಾಥ್ ತಿಳಿಸಿದ್ದಾರೆ.