ಮಡಿಕೇರಿ, ಡಿ. 20: ಜನ್ಮಕೊಟ್ಟ ತಂದೆ ಸಾವನ್ನಪ್ಪಿದ ಬೆನ್ನಲ್ಲೇ ಹೆತ್ತ ತಾಯಿ ಹಾಗೂ ಐವರು ಸಹೋದರಿ ಯರಿಂದ ಆಸ್ತಿಗಾಗಿ ಉಪದ್ರ ಸಹಿಸಲಾರದೆ ಯುವಕನೊಬ್ಬ ಇಲ್ಲಿನ ಪಂಪ್‍ಕೆರೆಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಘಟನೆ ನಿನ್ನೆ ಸಂಜೆ ಸಂಭವಿಸಿದೆ.
ಮೂಲತಃ ಎರಡನೇ ಮೊಣ್ಣಂಗೇರಿ ನಿವಾಸಿ ಜಯಪ್ರಕಾಶ್ (32) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕಿರಿಯ ವಯಸ್ಸಿನಿಂದಲೇ ಹೆತ್ತವರು ಮತ್ತು ಒಡಹುಟ್ಟಿದವರಿಗೆ ಆಸರೆಯಾಗಿ ದುಡಿಯುತ್ತಿದ್ದ ಈತ ಬಡಗಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಅಲ್ಲದೆ ಸುಮಾರು ನಾಲ್ಕು ಎಕರೆಯಷ್ಟು ಜಾಗದಲ್ಲಿ ತೋಟ ಮಾಡಿಕೊಂಡು; ಇತ್ತೀಚಿನ ಸಮಯದಲ್ಲಿ ಬಾಡಿಗೆಗೆ ದುಡಿಮೆಗಾಗಿ ಸಾಲಮಾಡಿ ವಾಹನ ಹೊಂದಿದ್ದ.
ನಾಲ್ಕು ತಿಂಗಳ ಹಿಂದೆ ತಂದೆ ಮೃತರಾಗಿದ್ದು, ಬಳಿಕ ತಾಯಿ ಹಾಗೂ ಸಹೋದರಿಯರು ಮತ್ತು ಬಾವಂದಿರೊಡಗೂಡಿ ಆಸ್ತಿಗಾಗಿ ಉಪದ್ರ ನೀಡುತ್ತಿದ್ದರೆನ್ನಲಾಗಿದೆ. ಮೇಲಿಂದ ಮೇಲೆ ಉಪದ್ರ ಸಹಿಸಲಾಗದೆ ನಿನ್ನೆ ಸಂಜೆ 4.45ರ ಸುಮಾರಿಗೆ ಪತ್ನಿ ಹಾಗೂ ಸ್ನೇಹಿತನಿಗೆ ಕರೆ ಮಾಡಿ ಪಂಪ್‍ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಅಂತಿಮ ಸಂದೇಶ ರವಾನಿಸಿದ್ದಾನೆ.
ಕೂಡಲೇ ಸ್ನೇಹಿತರು ಅತ್ತ ಧಾವಿಸುವಷ್ಟರಲ್ಲಿ ಜಯಪ್ರಕಾಶ್ ತನ್ನ ಬೈಕ್ ನಿಲ್ಲಿಸಿ, ಮೊಬೈಲ್ ಹಾಗೂ ಕೀಲಿಕೈಯೊಂದಿಗೆ ಪಾದರಕ್ಷೆ, ವಸ್ತ್ರಗಳನ್ನು ಕೆರೆದಂಡೆಯಲ್ಲಿ ಇರಿಸಿ ಬದುಕಿಗೆ ವಿದಾಯ ಹೇಳಿದ್ದಾನೆ. ಆ ಮೇರೆಗೆ ನಗರ ಪೊಲೀಸರು ನಿನ್ನೆ ರಾತ್ರಿಯಾದ್ದರಿಂದ ಇಂದು ಹತ್ತು ಗಂಟೆ ಸುಮಾರಿಗೆ ಶವ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಜಯಪ್ರಕಾಶ್ ಪತ್ನಿ ಹಾಗೂ ಓರ್ವ ಮಗುವನ್ನು ಅಗಲಿದ್ದು, ಮೃತನ ಪತ್ನಿ ಶೈನಿ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.