ವೀರಾಜಪೇಟೆ, ಡಿ. 12: ಇಲ್ಲಿಗೆ ಸಮೀಪದ ಕದನೂರು ಗ್ರಾಮದ ಸೇತುವೆ ಪಕ್ಕದ ಹೊಳೆಗೆ ಯುವಕ ಹಾಗೂ ಯುವತಿ ಬಿದ್ದು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದು ಮಧ್ಯಾಹ್ನ ಇಬ್ಬರ ಮೃತದೇಹ ದೊರೆತಿದೆ.

ವೀರಾಜಪೇಟೆ ಸರಕಾರಿ ಪದವಿ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿನಿ ಅನುಷ್ಯಾ(18) ಹಾಗೂ ಈಕೆಯ ಸಹೋದರ ಸಂಬಂಧಿ ಹೇಮಂತ್(24) ಇಂದು ಬೆಳಿಗ್ಗೆ 10-30ಗಂಟೆಗೆ ಹೊಳೆಗೆ ಬೀಳುವ ಮೊದಲು ವಿಷ ಸೇವಿಸಿದ್ದಾರೆ. ಮೃತ ದೇಹವನ್ನು ಹೊರಗೆ ತೆಗೆಯುವ ಸಮಯದಲ್ಲಿ ಇಬ್ಬರು ವಿಷ ಸೇವಿಸಿದ್ದರಿಂದ ಬಾಯಿಯಲ್ಲಿ ನೊರೆ ಬರುತ್ತಿತ್ತೆನ್ನಲಾಗಿದೆ.

ಹೇಮಂತ್,ಅನುಷ್ಯಾಳ ದೊಡ್ಡತಾಯಿ ಮಗನಾಗಿದ್ದು ಬಡಗಿ ವೃತ್ತಿಯಲ್ಲಿದ್ದನು. ಇವರಿಬ್ಬರು ಅನ್ಯೋನ್ಯವಾಗಿದ್ದರು. ನಿಗೂಢ ರೀತಿಯ ಸಾವಿಗೆ ಕಾರಣ ತಿಳಿದು ಬಂದಿಲ್ಲ ಎಂದು ಅನುಷ್ಯಾಳ ತಾಯಿ ಮಂಜುಳಾ ತಿಳಿಸಿದ್ದಾರೆ. ಹೇಮಂತ್‍ನ ತಂದೆ ಸಿದ್ದರಾಜು ಅರಸುನಗರದಲ್ಲಿ ವಾಸಿಸುತ್ತಿದ್ದರೆ ಅನುಷ್ಯಾಳ ತಂದೆ ಸೋಮಚಾರಿ ಚರ್ಚ್ ಬೀದಿಯ ನಿವಾಸಿಯಾಗಿದ್ದಾರೆ. ಇಬ್ಬರು ಕೂಲಿ ಕಾರ್ಮಿಕರಾಗಿದ್ದು ಮೂಲತಃ ಹುಣಸೂರು ಹಾಗೂ ಎಚ್.ಡಿ. ಕೋಟೆಯ ಮೂಲದವರಾಗಿದ್ದು ಕೆಲಸದ ನಿಮಿತ್ತ ವೀರಾಜಪೇಟೆಗೆ ಬಂದಿದ್ದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮೃತದೇಹ ದೊರೆತ ಸ್ಥಳದಲ್ಲಿ ಬೈಕ್ 45 ಎಕ್ಸ್ 7949 ದೊರೆತಿದ್ದು ಇದನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಹೊಳೆಗೆ ಬೀಳುವ ಮೊದಲು ಹೊಳೆಯ ಬದಿಯಲ್ಲಿ ಅನುಷ್ಯಾ ಹಾಗೂ ಹೇಮಂತ್ ಜೊತೆಯಲ್ಲಿಯೇ ಕುಳಿತು ಕೆಲ ಹೊತ್ತು ಪರಸ್ಪರ ಮಾತನಾಡುತ್ತಿದ್ದುದನ್ನು ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಗ್ರಾಮಸ್ತರು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ಇಬ್ಬರು ನಿಗೂಢ ರೀತಿಯಲ್ಲಿ, ಆತ್ಮಹತ್ಯೆ ಮಾಡಿಕೊಂಡಿರುವದನ್ನು ನೋಡಿದರೆ ಪರಸ್ಪರ ಪ್ರೀತಿಸುತ್ತಿರಬೇಕು ಎಂದು ಶಂಕಿಸಲಾಗಿದೆ. ಸಹೋದರ ಸಂಬಂಧಿಗಳ ನಡುವೆ ಪ್ರೀತಿ ಉಂಟಾಗಿರಬಹುದು. ಸಾಮಾಜಿಕ ವಾಗಿ ಇವರ ಪ್ರೀತಿಯನ್ನು ಸಂಬಂಧಿಕರು ಹಾಗೂ ಸಮಾಜ ಒಪ್ಪಲು ಸಾಧ್ಯವಿಲ್ಲವೆಂದಾಗ ಇದು ನಿಗೂಢ ಆತ್ಮಹತ್ಯೆಗೆ ಕಾರಣ ವಾಗಿರಬಹುದು ಎಂದು ಶಂಕಿಸಲಾಗಿದೆ.

ಅನುಷ್ಯಾ ಕಾಲೇಜಿನ ಸಮವಸ್ತ್ರದಲ್ಲಿದ್ದು ಇಬ್ಬರು ಬೈಕ್‍ನಲ್ಲಿ ತೆರಳಿ ನಿಗೂಢ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಳೆಯಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಬಿದ್ದಿರುವದನ್ನು ನೋಡಿದರೆ ಈ ಇಬ್ಬರು ಪ್ರೇಮಿಗಳೆಂದು ಊಹಿಸಬಹುದು. ಘಟನೆ ನಡೆದ ಸ್ಥಳಕ್ಕೆ ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರ್ ಆರಾಧ್ಯ, ಗ್ರಾಮಾಂತರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಸುರೇಶ್ ಬೋಪಣ್ಣ ಮಹಜರು ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಬ್ಬರ ಮೃತ ದೇಹಗಳನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿದ ನಂತರ ಮೃತದೇಹಗಳನ್ನು ವಾರೀಸುದಾರರಿಗೆ ಒಪ್ಪಿಸಲಾಯಿತು.