ಶ್ರೀಮಂಗಲ, ಡಿ. 12: ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ ಕಳೆದ 42 ದಿನಗಳಿಂದ ನಡೆಯುತ್ತಿರುವ ಪ್ರತಿಭಟನಾ ಸತ್ಯಾಗ್ರಹದಲ್ಲಿ ಹುದಿಕೇರಿ ಗ್ರಾ.ಪಂ, ಈಚೂರು ಕುಂದ ಗ್ರಾಮದ ಬೆಟ್ಯತ್‍ನಾಡು ಸ್ಪೋಟ್ರ್ಸ್ ಅಸೋಸಿಯೇಷನ್, ಹುದಿಕೇರಿಯ ಶ್ರೀರಾಮ ಮಂದಿರ ಆಡಳಿತ ಮಂಡಳಿ ಪಾಲ್ಗೊಳ್ಳುವ ಮೂಲಕ ಬೆಂಬಲ ವ್ಯಕ್ತಪಡಿಸಿತು.

ಈ ಸಂದರ್ಭ ಪೊನ್ನಂಪೇಟೆ ಹಿರಿಯ ನಾಗರಿಕ ವೇದಿಕೆಯ ಪ್ರಮುಖರು ಮತ್ತು ಜಿ.ಪಂ. ಮಾಜಿ ಸದಸ್ಯ ಎಂ.ಎಸ್. ಕುಶಾಲಪ್ಪ ಮಾತನಾಡಿ, ಕಳೆದ 42 ದಿನಗಳಿಂದ ಶಾಂತಿಯುತವಾಗಿ ತಾಲೂಕು ರಚನೆಗಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ನೂತನ ತಾಲೂಕು ವ್ಯಾಪ್ತಿಗೆ ಸೇರುವ ತಿತಿಮತಿಯ ಆನೆಚೌಕೂರು ಗೇಟ್, ಕುಟ್ಟದ ಅಂತರಾಜ್ಯ ಗೇಟ್, ಬಾಳೆಲೆಯ ಸಮೀಪದ ಕಾರ್ಮಾಡಿನ ಗೇಟ್‍ಗಳನ್ನು ಬಂದ್ ಮಾಡಲು ಸಮಾಲೋಚನೆ ನಡೆಸಲಾಗುತ್ತಿದೆ. ಈ ಹೋರಾಟಕ್ಕೆ ಈ ವ್ಯಾಪ್ತಿಯ ಎಲ್ಲಾ ಜನರು ಬೆಂಬಲ ನೀಡಲು ಕರೆ ನೀಡಿದರು.

ಹುದಿಕೇರಿ ಗ್ರಾ.ಪಂ. ಅಧ್ಯಕ್ಷೆ ಮತ್ರಂಡ ರೇಖಾ ಪೊನ್ನಪ್ಪ ಮಾತನಾಡಿ, ದ. ಕೊಡಗಿಗೆ ಅತ್ಯಂತ ದೂರದಲ್ಲಿರುವ ವೀರಾಜಪೇಟೆ ತಾಲೂಕು ಕೇಂದ್ರಕ್ಕೆ ತಮ್ಮ ಕೆಲಸ ಕಾರ್ಯಗಳಿಗೆ ತೆರಳಿ ಕೆಲಸ ಮಾಡಿಸಿಕೊಳ್ಳಲು ಕಷ್ಟವಾಗುತ್ತಿದೆ. ಒಮ್ಮೆ ಹೋದರೆ ಅಲ್ಲಿ ಕೆಲಸ ಆಗುವದಿಲ್ಲ. ಆದ್ದರಿಂದ ಬಹಳಷ್ಟು ರೈತರು ತಮ್ಮ ಆಸ್ತಿಯ ಹಕ್ಕುಪತ್ರ ಮಾಡಿಕೊಳ್ಳಲು ಸಾಧ್ಯವಾಗದೆ, ಅಲೆದಾಡಿ ಸಾಕಾಗಿದೆ. ಆದ್ದರಿಂದ ಜನರಿಗೆ ಸೌಕರ್ಯವಾಗುವ ಹಾಗೂ ಅಭಿವೃದ್ಧಿಗೆ ಪೂರಕವಾಗುವಂತೆ ಪೊನ್ನಂಪೇಟೆ ತಾಲೂಕು ರಚನೆ ಮಾಡುವ ನಿಟ್ಟಿನಲ್ಲಿ ಸರ್ಕಾರ ತ್ವರಿತವಾಗಿ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಹುದಿಕೇರಿಯ ಶ್ರೀರಾಮ ಮಂದಿರದ ಅಧ್ಯಕ್ಷರಾದ ಐಪುಮಾಡ ರೋನಿ ಮಾತನಾಡಿ, ಕಳೆದ ಒಂದೂವರೆ ತಿಂಗಳಿನಿಂದ ಗಾಂಧಿ ಪ್ರತಿಮೆ ಎದುರು ಶಾಂತಿಯುತ ಹೋರಾಟ ನಡೆಸುತ್ತಿದ್ದು, ಸರ್ಕಾರ ಇದನ್ನು ಪರಿಗಣಿಸದಿದ್ದರೆ 24 ಗಂಟೆಗಳ ಕಾಲ ಬಂದ್, ಬಂದ್‍ನೊಂದಿಗೆ ರಸ್ತೆ ತಡೆ ಹೋರಾಟವನ್ನು ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಬೇಕಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಚೆಟ್ರುಮಾಡ ಶಂಕರುನಾಚಪ್ಪ ಮಾತನಾಡಿದರು. ಬೊಟ್ಯತ್‍ನಾಡ್ ಸ್ಪೋಟ್ರ್ಸ್ ಅಸೋಸಿಯೇಷನ್‍ನ ಅಧ್ಯಕ್ಷ ಶ್ರೀಮಂತ್ ಮುತ್ತಣ್ಣ, ಪದಾಧಿಕಾರಿಗಳಾದ ಪ್ರಾಣ್ ಬೋಪಣ್ಣ, ಹರೀಶ್, ಮನೋಜ್, ಶ್ರೀರಾಮ ಮಂದಿರದ ಆಡಳಿತ ಮಂಡಳಿ ಉಪಾಧ್ಯಕ್ಷ ಮಂಡಂಗಡ ಅಶೋಕ್, ಚಂಗುಲಂಡ ಸೂರಜ್, ಹುದಿಕೇರಿ ಗ್ರಾ.ಪಂ. ಉಪಾಧ್ಯಕ್ಷೆ ಎ.ಬಿ. ಸುನಿತಾ ಮತ್ತು ಸದಸ್ಯರು, ವಕೀಲ ಸಂದೇಶ್ ನೆಲ್ಲಿತ್ತಾಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಉಪಧ್ಯಕ್ಷ ಎ. ಅಹಮ್ಮದ್, ಹುದಿಕೇರಿ ವಲಯ ಕಾಂಗ್ರೆಸ್ ಕಾರ್ಯದರ್ಶಿ ಆಲೀರ ಸಾದಲಿ, ಕೊಟ್ಟಂಗಡ ರಾಜಾ ಸುಬ್ಬಯ್ಯ, ಮತ್ರಂಡ ದಿಲ್ಲು, ಕಿರುಗೂರಿನ ಕೋದೇಂಗಡ ವಿಠಲ, ಪೊನ್ನಂಪೇಟೆ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಚಿರಿಯಪಂಡ ಕಾಶಿಯಪ್ಪ, ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ರಾಜಾ ನಂಜಪ್ಪ, ಪೊನ್ನಂಪೇಟೆ ಎ.ಪಿ.ಎಂ.ಸಿ. ಅಧ್ಯಕ್ಷ ಪ್ರಭು ಪೂಣಚ್ಚ, ಪೊನ್ನಂಪೇಟೆ ಹಿರಿಯ ನಾಗರಿಕ ವೇದಿಕೆಯ ಅದ್ಯಕ್ಷರಾದ ಪೊಕ್ಕಳಿಚಂಡ ಪೂಣಚ್ಚ ಮತ್ತು ಪಧಾದಿಕಾರಿಗಳು ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.