ಮಡಿಕೇರಿ, ಡಿ. 13: ರಾಷ್ಟ್ರೀಯ ಸ್ವಾಸ್ಥ ಬೀಮಾ ಯೋಜನೆಯ 2012ರ ಕಾರ್ಡ್‍ಗಳನ್ನು ನವೀಕರಣ ಮಾಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ರಾಷ್ಟ್ರೀಯ ಸ್ವಾಸ್ಥ ಬೀಮಾ ಯೋಜನೆಯ ಕುಂದುಕೊರತೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಹೊರಗುತ್ತಿಗೆ ಆಧಾರದ ಮೇಲೆ ಜನರನ್ನು ನೇಮಕ ಮಾಡಿ ಕೆಲಸವನ್ನು ಪೂರ್ಣಗೊಳಿಸಿ. ಹಾಗೆಯೇ ಕಂಪ್ಯೂಟರ್ ಇಲ್ಲದವರಿಗೆ ಕಂಪ್ಯೂಟರ್ ಒದಗಿಸಿ, ಮೂರು ವರ್ಷಗಳ ಮಾಹಿತಿಯನ್ನು ಕೊಡಿ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಿವಕುಮಾರ್ ಮಾತನಾಡಿ, ಬಡವರಿಗೆ ಸೌಕರ್ಯ ಸಿಗಬೇಕು. ಅವರ ಆರೋಗ್ಯ ಬಹಳ ಮುಖ್ಯ. ಸೋಮವಾರಪೇಟೆಯಲ್ಲಿ ರಾಷ್ಟ್ರೀಯ ಸ್ವಾಸ್ಥ ಬೀಮಾ ಯೋಜನೆಯಡಿ ಸ್ವೀಕೃತಗೊಂಡ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅವರಿಗೆ ತಿಳಿಸಿದರು. ಆರ್.ಎಸ್.ಬಿ. ವೈ.ಯನ್ನು ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎಂದು ಅವರು ತಿಳಿಸಿದರು.

ಡಾ. ವಿಶ್ವನಾಥ್ ಮಾತನಾಡಿ, ಸೌಲಭ್ಯ ವಂಚಿತರಾಗಿರುವ ವ್ಯಕ್ತಿಗಳ ಆರ್.ಎಸ್.ಬಿ.ವೈ. ಕಾರ್ಡ್ ಬಳಕೆಯಾಗುತ್ತಿಲ್ಲ. ಹಳೆಯ ಕಾರ್ಡ್ ಆದ್ದರಿಂದ ನಮ್ಮಲ್ಲಿರುವ ಕಂಪ್ಯೂಟರ್ ಡೆಟಾದಲ್ಲಿರುವ ಮಾಹಿತಿಯನ್ನು ಸ್ವೀಕರಿಸುತ್ತಿಲ್ಲ.

ಉಳಿಕೆ ಇರುವ ಕೆಲಸವನ್ನು ಶೀಘ್ರದಲ್ಲಿ ಮಾಡುತ್ತೇವೆ ಹಾಗೂ ಆರ್.ಎಸ್.ಬಿ.ವೈ.ಯನ್ನು ಆಧಾರ್ ಕಾರ್ಡ್‍ಗೆ ಲಿಂಕ್ ಮಾಡುತ್ತೇವೆ ಎಂದು ತಿಳಿಸಿದರು.

ಸಂಯೋಜಕ ತೇಜಸ್ ಮಾತನಾಡಿ, ನಾಪೋಕ್ಲು, ಕುಟ್ಟ ಮತ್ತು ಶನಿವಾರಸಂತೆಗಳಲ್ಲಿ ಕಂಪ್ಯೂಟರ್ ಸಮಸ್ಯೆ ಇದೆ. ಕುಟ್ಟದಲ್ಲಿ 2012ರ ಆರ್.ಎಸ್.ಬಿ.ವೈ. ಹಳೆಯ ಕಾರ್ಡ್ ಆದ್ದರಿಂದ ಚಾಲನೆಯಲ್ಲಿ ಇಲ್ಲ ಇದರ ಬಗ್ಗೆ ಗ್ರಾಮ ಪಂಚಾಯಿತಿ ಗಮನಹರಿಸಬೇಕು ಎಂದು ತಿಳಿಸಿದರು. ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.